ಜನ ವಿರೋಧದ ನಡುವೆಯೂ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಮುಂದಾದ ಸರ್ಕಾರದ ನಿಲುವು ಖಂಡಿಸಿ ಅಂಕೋಲಾದ ಜನ ಸಿಡಿದೆದ್ದಿದಾರೆ. ಅಂಕೋಲಾದಿoದ ಕಾರವಾರದವರೆಗೂ ಸಾವಿರಾರು ಸಂಖ್ಯೆಯ ಜನ ಪಾದಯಾತ್ರೆ ನಡೆಸಿ ಯೋಜನೆ ವಿರುದ್ಧ ಧಿಕ್ಕಾರ ಮೊಳಗಿಸಲು ನಿರ್ಣಯಿಸಿದ್ದಾರೆ.
ಅಂಕೋಲಾದ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸರ್ಕಾರ ಆಸಕ್ತಿವಹಿಸಿದೆ. ಇಲ್ಲಿ ಹೂಡಿಕೆ ಮಾಡಲು ಜೆಎಸ್‌ಡಬ್ಲೂ ಕಂಪನಿ ಮುಂದೆ ಬಂದಿದೆ. ಆದರೆ, ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಕೆ ಮೇಲೆ ದುಷ್ಪರಿಣಾಮ ಬೀರಲಿದೆ. ಜೊತೆಗೆ ವ್ಯಾಪಕ ಪ್ರಮಾಣದಲ್ಲಿ ಪರಿಸರ ಹಾನಿ ಆಗಲಿದೆ. ಹೀಗಾಗಿ ಅನೇಕರು ಈ ಯೋಜನೆ ವಿರುದ್ಧ ಕಿಡಿಕಾರಿದ್ದಾರೆ. ಯಾವುದೇ ಕಾರಣಕ್ಕೂ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅವಕಾಶಕೊಡಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ, ಕಳೆದ ಒಂದು ವರ್ಷದಿಂದ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಹೋರಾಟಗಾರರಿಗೆ ಯಾವ ಭರವಸೆಯನ್ನು ನೀಡಿಲ್ಲ. ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಗ್ರಾಮ ಪಂಚಾಯತಗಳು ಠರಾವು ಮಾಡಿದ್ದರೂ ಅದಕ್ಕೆ ಬೆಲೆ ಕೊಟ್ಟಿಲ್ಲ. ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಹ ವಾಣಿಜ್ಯ ಬಂದರು ವಿರುದ್ಧವಾಗಿ ಸಾವಿರ ಸಂಖ್ಯೆಯ ಅರ್ಜಿ ಸಲ್ಲಿಕೆಯಾಗಿದ್ದು, ಅದನ್ನು ಸಹ ಗಂಭೀರವಾಗಿ ಪರಿಗಣಿಸಿಲ್ಲ. ಈ ಎಲ್ಲಾ ಹಿನ್ನಲೆ ಅಂಕೋಲಾದ ಜನ ಪಾದಯಾತ್ರೆ ನಡೆಸಿ ಯೋಜನೆ ವಿರೋಧಿಸಲು ನಿರ್ಧರಿಸಿದ್ದಾರೆ.
ಉತ್ತರ ಕನ್ನಡ ಉಳಿಸಿ ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಹತ್ತಾರು ಹಳ್ಳಿಯ ಜನ ಅಂಕೋಲಾದಿAದ ಕಾರವಾರದವರೆಗೆ ಸಂಚರಿಸಲಿದ್ದಾರೆ. ಜುಲೈ 22ರಂದು ಅಂಕೋಲಾದ ಸ್ವಾತಂತ್ರ ಸಂಗ್ರಾಮ ಸ್ಮಾರಕ ಭವನದಿಂದ ಈ ಪಾದಯಾತ್ರೆ ಶುರುವಾಗಲಿದೆ. ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದು ಹೋಗಿ ಕೇಣಿ ವಾಣಿಜ್ಯ ಬಂದರು ಯೋಜನೆ ಕೈ ಬಿಡುವಂತೆ ಹಕ್ಕೊತ್ತಾಯ ಮಾಡಲಿದ್ದಾರೆ. ಈ ಪಾದಯಾತ್ರೆಗೆ ಅನುಮತಿ ಕೋರಿ ಈ ದಿನ ಜಿಲ್ಲಾಡಳಿತಕ್ಕೂ ಪತ್ರ ಕೊಟ್ಟಿದ್ದಾರೆ.