ಕಾರವಾರದ ಪೊಲೀಸ್ ಪೇದೆಯಾಗಿರುವ ಪ್ರಸಾದ ತಲಗೇರಿ ಅವರು ಅಂಕೋಲಾದ ಗಣೇಶ ನಾಯ್ಕ ಎಂಬಾತರಿಗೆ ಫೋನ್ ಮಾಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಕಾರಣ 5 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಅವರು ಸೂಚಿಸಿದ್ದಾರೆ. ಆದರೆ, ಕಾರವಾರದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿ ಅಂಕೋಲಾದ ಅವರ್ಸಾ ಬಳಿ ಕಾರು ನಿಲ್ಲಿಸದ ಕಾರಣ ಫೋನ್ ಮಾಡಿ, ದಂಡ ಪಾವತಿಸುವಂತೆ ಸೂಚಿಸಿದ್ದರಿಂದ ಅನುಮಾನಗೊಂಡ ಮಂಜುನಾಥ ನಾಯ್ಕ ಎಂಬಾತರು ಈ ಬಗ್ಗೆ ತನಿಖೆಗೆ ಆಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಜುಲೈ 15ರಂದು ಅಂಕೋಲಾದ ಗಣೇಶ ವಾಸುದೇವ ನಾಯ್ಕ ಅವರು ಅಂಕೋಲಾದಿAದ ಕಾರವಾರ ಕಡೆ ತಮ್ಮ ಇನೋವಾ ಕಾರಿನಲ್ಲಿ ಹೋಗುತ್ತಿದ್ದರು. ಬೆಳಗ್ಗೆ 9.45ರ ವೇಳೆಗೆ ಅವರ್ಸಾ ಬಳಿ ಪೊಲೀಸ್ ಸಿಬ್ಬಂದಿ ಪ್ರಸಾದ ತಲಗೇರಿ ಅವರು ನಿಂತಿದ್ದರು. ಪ್ರಸಾದ ತಲಗೇರಿ ಅವರು ಆ ಕಾರಿಗೆ ಅಡ್ಡಲಾಗಿ ಕೈ ಮಾಡಿದ್ದು, ಗಣೇಶ ನಾಯ್ಕ ಅವರು ಕಾರು ನಿಲ್ಲಿಸಲಿಲ್ಲ. ಅದರಿಂದ ಸಿಟ್ಟಾದ ಪ್ರಸಾದ ತಲಗೇರಿ ಅವರು ಗಣೇಶ ನಾಯ್ಕ ಅವರ ಮೊಬೈಲ್ ಸಂಖ್ಯೆ ಹುಡುಕಿದರು. ಆ ಸಂಖ್ಯೆಗೆ ಫೋನ್ ಮಾಡಿ ಬೈದರು. `ಕೈ ಮಾಡಿದರೂ ಕಾರು ನಿಲ್ಲಿಸಲು ಆಗಿಲ್ವೇ?’ ಎಂದು ಪ್ರಶ್ನಿಸಿ, ನಿಂದಿಸಿದರು. `5 ಸಾವಿರ ರೂ ದಂಡ ಕಟ್ಟಬೇಕು’ ಎಂದು ಸಹ ಹೇಳಿದರು.
ಇದರಿಂದ ಹೆದರಿದ ಗಣೇಶ ನಾಯ್ಕ ಅವರು ತಮ್ಮ ಸಂಬAಧಿ ಮಂಜುನಾಥ ನಾಯ್ಕ ಅವರಿಗೆ ಫೋನ್ ಮಾಡಿದರು. ಪೊಲೀಸರ ಹೆಸರಿನಲ್ಲಿ ಬಂದ ಫೋನ್ ನಂ ಪಡೆದ ಮಂಜುನಾಥ ನಾಯ್ಕ ಅವರು ಅದೇ ಸಂಖ್ಯೆಗೆ ಫೋನಾಯಿಸಿದರು. ದಂಡ ಪಾವತಿಸಬೇಕಾದ ವಿಷಯದ ಬಗ್ಗೆ ಪ್ರಸ್ತಾಪಿಸಿದರು. `ಪೊಲೀಸ್ ಚೆಕ್ಕಿಂಗ್ ನಡೆಯುತ್ತಿದ್ದು, ಕಾರಿನವರು ಕೈ ಮಾಡಿದರೂ ನಿಲ್ಲಿಸಲಿಲ್ಲ’ ಎಂದು ಪೊಲೀಸ್ ಸಿಬ್ಬಂದಿ ಪ್ರಸಾದ ತಲಗೇರಿ ಅವರು ಹೇಳಿದರು. `ಅಲ್ಲಿ ಯಾವುದೇ ಚಕ್ಕಿಂಗ್ ನಡೆಯುತ್ತಿರಲಿಲ್ಲ’ ಎಂದು ಮಂಜುನಾಥ ನಾಯ್ಕ ಅವರು ವಾದಿಸಿದರು. ಅದಾಗಿಯೂ, `5 ಸಾವಿರ ರೂ ದಂಡ ಕಟ್ಟಬೇಕು’ ಎಂದು ಪ್ರಸಾದ ತಲಗೇರಿ ಅವರು ಹೇಳಿದರು.
`ನೀವು ಪೊಲೀಸ್ ಇಲಾಖೆಯಲ್ಲಿ ಯಾವ ಹುದ್ದೆಯಲ್ಲಿದ್ದೀರಿ?’ ಎಂದು ಮಂಜುನಾಥ ನಾಯ್ಕ ಅವರು ಪ್ರಶ್ನಿಸಿದ್ದು, ಅದಕ್ಕೆ ಫೋನಿನಲ್ಲಿ ಮಾತನಾಡಿದ ವ್ಯಕ್ತಿ ಉತ್ತರಿಸಲಿಲ್ಲ. `ಯಾವ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತೀರಿ?’ ಎಂದು ಕೇಳಿದರೂ ಸಹ ಮಾತನಾಡಲಿಲ್ಲ. ಇದರಿಂದ ಅನುಮಾನಗೊಂಡ ಮಂಜುನಾಥ ನಾಯ್ಕ ಅವರು ಆ ಫೋನ್ ನಂ ಆಧಾರದಲ್ಲಿ ಮಾಹಿತಿ ಸಂಗ್ರಹಿಸಿದ್ದು, ಕಾರವಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಅಂಕೋಲಾದ ಅವರ್ಸಾ ಬಳಿ ಏಕಾಂಗಿಯಾಗಿ ವಾಹನ ತಪಾಸಣೆ ಮಾಡುತ್ತಿರುವ ವಿಷಯ ಕೇಳಿ ಅಚ್ಚರಿವ್ಯಕ್ತಪಡಿಸಿದರು.
ಇದನ್ನೂ ಓದಿ: ನಂದೇನೂ ತಪ್ಪಿಲ್ಲ!
ಅದಾದ ನಂತರ ಪೊಲೀಸ್ ಪೇದೆಯೊಬ್ಬರು ಅಧಿಕಾರ ದುರುಪಯೋಗಪಡಿಸಿಕೊಂಡು ಜನರನ್ನು ಬೆದರಿಸಿ ಹಣ ಬೇಡಿದ ಬಗ್ಗೆ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದರು. ಫೋನ್ ಬಂದ ಸಂಖ್ಯೆಯನ್ನು ನೀಡಿ ಪ್ರಕರಣ ದಾಖಲಿಸುವಂತೆ ಅವರು ಪತ್ರ ರವಾನಿಸಿದರು.