ಅಂಕೋಲಾ ಗುಡಿಗಾರಗಲ್ಲಿಯಲ್ಲಿರುವ ಸುದರ್ಶನ ಹೋಟೆಲಿನಲ್ಲಿ ಮಾರಾಮಾರಿ ನಡೆದಿದೆ. ಊಟಕ್ಕೆ ಬಂದ ಗ್ರಾಹಕರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಎರಡು ಗುಂಪುಗಳಲ್ಲಿ ಅವರು ಹೊಡೆದಾಡಿಕೊಂಡಿದ್ದಾರೆ.
ಮAಗಳವಾರ ರಾತ್ರಿ ಪಟ್ಟಣದ ಗುಡಗಾರ ಗಲ್ಲಿಯಲ್ಲಿರುವ ಸುದರ್ಶನ ಹೋಟೆಲಿಗೆ ಕೆಲ ಗ್ರಾಹಕರು ಬಂದಿದ್ದರು. ಅಲ್ಲಿ ಊಟದ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ, ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿತು. ಅದು ಇನ್ನಷ್ಟು ದೊಡ್ಡದಾಗಿದ್ದು ಹೊಡೆದಾಟದ ಸ್ವರೂಪಪಡೆಯಿತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹಾಬಲೇಶ್ವರ ನಾಯಕ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಜಗಳ ತಡೆಯುವ ಪ್ರಯತ್ನ ಮಾಡಿದರು. ಆದರೆ, ಅದು ಅವರಿಂದ ಸಾಧ್ಯವಾಗಲಿಲ್ಲ.
ಅಂಕೋಲಾ ಕಣಗಿಲ್’ನ ನಿರಂಜನ ಗೋವಿಂದ ಹರಿಕಂತ್ರ, ಉಪ್ಪುಂದದ ಮನೋಜ್ಕುಮಾರ್ ಉದಯ ಖಾರ್ವಿ, ಕಿಶೋರ ಚಂದ್ರ ಮೊಗವೀರ, ಗೋಕರ್ಣ ಹೊಸಕಟ್ಟಾದ ಸೂರಜ ಗೋಪಾಲ ಹೊಸಕಟ್ಟಾ, ಕಣಗಿಲ್’ನ ದೀಪಕ ಉದಯ ಹರಿಕಂತ್ರ, ರಂಜನ ಗೋವಿಂದ ಹರಿಕಂತ್ರ ಅವರು ಒಂದು ಗುಂಪಾಗಿ ಕಾದಾಟ ನಡೆಸಿದರು. ಮತ್ತೊಂದು ಗುಂಪಿನಲ್ಲಿ ಅಂಕೋಲಾದ ಪ್ರಶಾಂತ ಗಣಪತಿ ನಾಯಕ, ಗಣಪತಿ ಬೀರಣ್ಣ ನಾಯಕ, ಬೇಲಹಿತ್ತಲದ ರಾಘವೇಂದ್ರ ಮಾಸ್ತಿ ಅಂಬಿಗ, ಸೂರ್ವೆಯ ನಾರಾಯಣ ಗುನಗಾ ಮತ್ತು ಅಂಕೋಲಾದ ಸದಾನಂದ ನಾಯ್ಕ ಶಕ್ತಿ ಪ್ರದರ್ಶನ ಮಾಡಿದರು. ಆ ಎಲ್ಲರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.