ಮುರುಡೇಶ್ವರ ದೇವಸ್ಥಾನದ ಹೆಸರಿನಲ್ಲಿ `ಲಕ್ಕಿ ಡ್ರಾ’ ಕೂಪನ್ ರಚಿಸಿ ಮಾರಾಟ ಮಾಡುತ್ತಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ದೇವರ ಹೆಸರನ್ನು ದುರುಪಯೋಗಪಡಿಸಿಕೊಂಡ ನರಸಿಂಗ್ ತಗರಖಡೆ ಅವರು ಕಾರಾಗೃಹ ಸೇರಿದ್ದಾರೆ.
2025ರ ಅಗಸ್ಟ್ – ಡಿಸೆಂಬರ್ ಅವಧಿಯಲ್ಲಿ ಮುರುಡೇಶ್ವರ ದೇವಸ್ಥಾನದ ಫೋಟೋ-ಮಾಹಿತಿ ಬಳಸಿ ಜಾಲತಾಣದಲ್ಲಿ `ಲಕ್ಕಿ ಡ್ರಾ’ ಪೋಸ್ಟರ್ ಹರಿಬಿಡಲಾಗಿತ್ತು. `299ರೂಪಾಯಿಗೆ ಅದೃಷ್ಟದ ಡ್ರಾ’ ಎಂಬ ಕೂಪನ್ ಹಂಚಿಕೊಳ್ಳಲಾಗಿತ್ತು. ಆ ಹಣ 299ರೂ ಪಾವತಿಸಿದರೆ ಬಗೆ ಬಗೆಯ ಉಡುಗರೆ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ, ಮುರುಡೇಶ್ವರಕ್ಕೆ ಹಾಗೂ ಆ `ಲಕ್ಕಿ ಡ್ರಾ’ ಯೋಜನೆಗೆ ಯಾವ ಸಂಬoಧವೂ ಇರಲಿಲ್ಲ. ಅದಾಗಿಯೂ, ಪದೇ ಪದೇ ಮುರುಡೇಶ್ವರದ ಹೆಸರಿನಲ್ಲಿ ಲಕ್ಕಿ ಡ್ರಾ ಕಾಣಿಸಿಕೊಳ್ಳುತ್ತಿತ್ತು. . ಭಕ್ತರು ನೀಡಿದ ಹಣ ಇರ್ಷಾದ್ ಎಂಬಾತರ ಖಾತೆ ಸೇರುತ್ತಿತ್ತು. ಇದನ್ನು ಅರಿತ ದೇಗುಲದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ದೇವರ ಹೆಸರಿನಲ್ಲಿ ದುಡ್ಡು ಮಾಡುವವನ ಪತ್ತೆಗೆ ವಿಶೇಷ ತಂಡವನ್ನು ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗಿರೀಶ ಬಿ, ಸಿಪಿಐ ಜಗದೀಶ ಕಂಚಿನಾಳ ಸೇರಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಪಿಸೈ ಹನುಮಂತ ಬೀರಾದರ್, ಲೋಕನಾಥ ರಾಥೋಡ್ ಅವರ ಜೊತೆ ಪೊಲೀಸ್ ಸಿಬ್ಬಂದಿ ಮಂಜುನಾಥ ಲಕ್ಮಾಪುರ, ಬಿಲಾಲಅಹ್ಮದ್ ಸಿದ್ದಾಪುರ, ವಿಜಯ ನಾಯ್ಕ, ಸಿದ್ದಪ್ಪ ಕಾಂಬ್ಳೆ ಅವರು ಆರೋಪಿಯನ್ನು ಹುಡುಕಾಡಿದರು.
ಇದನ್ನೂ ಓದಿ: ಆ ದಿನ ನಡೆದಿದ್ದೇನು? ಮುರುಡೇಶ್ವರದ ಹೆಸರಿನಲ್ಲಿ ಮೋಸ!
ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಬೀದರ್ ಜಿಲ್ಲೆಯಲ್ಲಿ ಪೊಲೀಸರು ಆರೋಪಿಯ ಶೋಧ ನಡೆಸಿದರು. ಒಂದು ವರ್ಷಗಳ ಕಾಲ ಆರೋಪಿಯ ಮಾಹಿತಿ ಸಂಗ್ರಹಿಸಿದರು. ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೊಟೇಲ್ ಕೆಲಸ ಮಾಡುವ ನರಸಿಂಗ್ ವೆಂಕಟರಾವ್ ತಖರಕಡೆ ಎಂಬಾತರನ್ನು ಹಿಡಿದರು. ಬೀದರಿನ ಬಾಲ್ಕಿಯಲ್ಲಿರುವ ಈ ನರಸಿಂಗ್ ತಖರಕಡೆ ಹೊಟೇಲ್ ಕೆಲಸ ಮಾಡುವವರಾಗಿದ್ದು, ಅದರ ಜೊತೆ ಜನರನ್ನು ಯಾಮಾರಿಸುವುದರಲ್ಲಿ ಪರಿಣತರಾಗಿದ್ದರು. ಅದೇ ಕೌಶಲ್ಯ ಬಳಸಿ ನರಸಿಂಗ್ ತಖರಕಡೆ ಅವರು ಮುರುಡೇಶ್ವರದ ಹೆಸರು ದುರುಪಯೋಗಪಡಿಸಿಕೊಂಡಿದ್ದು, ಸದ್ಯ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.