`ಉತ್ತರ ಕನ್ನಡ ಜಿಲ್ಲೆಯಲ್ಲಿ 82 ಸ್ಕಾನಿಂಗ್ ಸೆಂಟರ್’ಗಳಿದ್ದು, ಎಲ್ಲಾ ಸ್ಕಾನಿಂಗ್ ಸೆಂಟರ್’ಗಳನ್ನು ಆಗಾಗ ತಪಾಸಣೆಗೊಳಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. `ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆಯನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದವರು ಸೂಚಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ಸಕ್ಷಮ ಪ್ರಾಧಿಕಾರದ ಸಭೆ ನಡೆಸಿದ ಅವರು `82 ಸ್ಕಾನಿಂಗ್ ಸೆಂಟರುಗಳಿಗೆ ಅಧಿಕಾರಿಗಳು ಆಗಾಗ ಭೇಟಿ ನೀಡಬೇಕು. ಪರಿಶೀಲನೆ ಸಂದರ್ಭದಲ್ಲಿ ಕೆಂದ್ರದಲ್ಲಿನ ಅಗತ್ಯ ದಾಖಲಾತಿಗಳನ್ನು ಗಮನಿಸಬೇಕು. ಈ ಕೇಂದ್ರಗಳಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುತ್ತಿದ್ದಾರೆಯೇ? ಎಂದು ವಿಚಾರಣೆ ನಡೆಸಬೇಕು. ಭೇಟಿ ನೀಡಿದ ಸಂದರ್ಭದ ಜಿಪಿಎಸ್ ಪೋಟೋಗಳೊಂದಿಗೆ ಸಮಗ್ರ ವರದಿ ಸಿದ್ದಪಡಿಸಿ, ಈ ವರದಿಯನ್ನು ದೃಢೀಕರಿಸಿ ಸಲ್ಲಿಸಬೇಕು’ ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸಂಜಯ್ ದೊಡ್ಡಮನಿ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಕ್ರಿಮ್ಸ್’ನ ಸ್ತಿçà ರೋಗ ತಜ್ಞ ಡಾ ನರೇಶ ಪಾವಸ್ಕರ, ಸದಸ್ಯರಾದ ಕ್ರಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥ ಮತ್ತು ಸಹ ಪ್ರಾದ್ಯಾಪಕ ಡಾ ಪವನ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಬಿ ಶಿವಕುಮಾರ್, ವಕೀಲೆ ಸುಧಾರಾಣಿ, ಸಾಮಾಜಿಕ ಕಾರ್ಯಕರ್ತೆ ಯಶೋಧ ಹೆಗಡೆ ಮತ್ತು ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ ಅಶ್ವಿನಿ ಬೋರಕರ ಸದಸ್ಯರಾದ ರೇಡಿಯಾಲಜಿಸ್ಟ್ ಡಾ ಆಶಿತಾ, ರೋಟರಿ ಕ್ಲಬ್ಬಿನ ಹೇಮ್ಲಾ ಅಲ್ಫಾನ್ಸೋ ಸಭೆಯಲ್ಲಿದ್ದರು.