ಸಾಮಾನ್ಯವಾಗಿ ಎಲ್ಲಾ ಕಾಗೆಗಳು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಆದರೆ, ಯಲ್ಲಾಪುರದ ಜೋಡುಕೆರೆ, ಕೊಂಡೆಮನೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕೆಲ ದಿನಗಳಿಂದ ಬಿಳಿ ಬಣ್ಣದ ಕಾಗೆ ಹಾರಾಡುತ್ತಿದೆ.
ಬಿಳಿ ಬಣ್ಣದ ಪಕ್ಷಿ ನೋಡಿದ ಜನ ಮೊದಲು ಅದನ್ನು ಪಾರಿವಾಳ ಎಂದು ಭಾವಿಸಿದ್ದರು. ಆದರೆ, ಅದರ ಕೂಗು ಕೇಳಿದ ನಂತರ ಸಮೀಪದಿಂದ ಗಮನಿಸಿದ್ದು, ಅದು ಕಾಗೆ ಎಂದು ಗೊತ್ತಾಗಿದೆ. ಆ ಕಾಗೆಯ ಫೋಟೋ-ವಿಡಿಯೋ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು ಬಿಳಿ ಕಾಗೆ ನೋಡಿದ ಜನ ಕುತೂಹಲವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಮತ್ತು ವೈಜ್ಞಾನಿಕ ವಿವರಣೆಗಳ ಪ್ರಕಾರ, ಕಾಗೆಗಳ ಸಂತಾನೋತ್ಪತ್ತಿಯಲ್ಲಿ ಅಪರೂಪದ ಆನುವಂಶಿಕ ಬದಲಾವಣೆಗಳಿಂದ ಅಪರೂಪಕ್ಕೆ ಒಮ್ಮೆ ಇಂಥ ಕಾಗೆಗಳ ಜನನವಾಗುತ್ತದೆ. ಪಕ್ಷಿಯ ದೇಹದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯದ ಕೊರತೆ ಉಂಟಾದಾಗ ಬಣ್ಣ ಬದಲಾಗುವ ಸಾಧ್ಯತೆಗಳಿವೆ. ಅಲ್ಬಿನೋ ರೋಗದಿಂದ ಬಳಲುವ ಪಕ್ಷಿಗಳಲ್ಲಿಯೂ ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ. ಅಲ್ಬಿನೋ ಪಕ್ಷಿಗಳಲ್ಲಿ ದೃಷ್ಟಿ ಸಮಸ್ಯೆ ಕಾಣಿಸುತ್ತದೆ. ಹೀಗಾಗಿ ಅವು ತಮ್ಮ ಗುಂಪಿನಲ್ಲಿ ಸಹಜವಾಗಿ ಬೆರೆಯಲು ಕಷ್ಟಪಡುತ್ತಿದ್ದು, ಕಪ್ಪು ಕಾಗೆಗಳು ಅಂಥ ಪಕ್ಷಿಯನ್ನು ದೂರವಿಡುವ ಸಾಧ್ಯತೆಗಳು ಹೆಚ್ಚಿವೆ.
ಈ ಹಿಂದೆ ತಮಿಳುನಾಡಿನ ತಿರುಪತ್ತೂರು ಪ್ರದೇಶದಲ್ಲಿಯೂ ಬಿಳಿ ಕಾಗೆಯೊಂದು ಕಾಣಿಸಿತ್ತು. ಆಗ, ರಾಜಕೀಯ ಬದಲಾವಣೆ ಸಂಭವಿಸಲಿದೆ ಎಂಬ ಚರ್ಚೆ ನಡೆದಿತ್ತು. ಕಾಗೆ ಹಾಗೂ ಜ್ಯೋತಿಷ್ಯದ ನಂಬಿಕೆಯ ಬಗ್ಗೆಯೂ ಸದ್ಯ ಚರ್ಚೆ ನಡೆಯುತ್ತಿದೆ. ಆದರೆ, ಇದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.