ಮೂರು ವರ್ಷಗಳ ಕಾಲ ಉತ್ತರ ಕನ್ನಡದ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸಿದ ಮಂಕಾಳು ವೈದ್ಯ ಅವರು ಸೋಮವಾರ ಮತ್ತೊಮ್ಮೆ ಸಚಿವ ಸ್ಥಾನದ ಪಟ್ಟಿ ಸೇರಿದ್ದು, ಒಂದು ತಾಸಿನೊಳಗೆ ಅವರನ್ನು ಆ ಪಟ್ಟಿಯಿಂದ ಅವರನ್ನು ಹೊರದಬ್ಬಲಾಗಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಜೊತೆ ಕಾಂಗ್ರೆಸ್ ಹೈಕಮಾಂಡ್ ಹಾವು-ಏಣಿಯ ಆಟವಾಡಿದ್ದು, ಅದಕ್ಕೆ ಮಂಕಾಳು ವೈದ್ಯ ಅವರು ಬಲಿಪಶು ಆಗಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಅವಧಿಯಲ್ಲಿ ಮಂಕಾಳು ವೈದ್ಯ ಅವರು ಮೊದಲ ಬಾರಿ ಸಚಿವರಾಗಿದ್ದರು. ಮೀನುಗಾರಿಕೆ ಸಚಿವರಾಗಿದ್ದ ಅವರು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಯನ್ನುವಹಿಸಿಕೊಂಡಿದ್ದರು. ಜೊತೆಗೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾಗಿಯೂ ಮಂಕಾಳು ವೈದ್ಯ ಅವರು ಜವಾಬ್ದಾರಿ ನಿಭಾಯಿಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ನಂತರ ಡಿಕೆ ಶಿವಕುಮಾರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣ ನಾಯ್ಕ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಅವರು ಉಸ್ತುವಾರಿ ಸ್ಥಾನಕ್ಕಾಗಿ ಪೈಪೋಟಿಗಿಳಿದಿದ್ದರು. ಈಗಾಗಲೇ ಉಸ್ತುವಾರಿ ಸಚಿವರಾಗಿ ಅಧಿಕಾರ ಅನುಭವಿಸಿದ್ದ ಮಂಕಾಳು ವೈದ್ಯ ಅವರು ಸಹ ಸ್ಪರ್ಧೆಯಲ್ಲಿದ್ದರು.
ದೆಹಲಿಯ ಕಾಂಗ್ರೆಸ್ ಹೈಕಮಾಂಡಿನಿoದ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಅಗಸ್ಟ 3ರ ಸೋಮವಾರ ಪತ್ರವೊಂದು ಬಂದಿತು. ಆ ಪತ್ರದಲ್ಲಿ 20 ಶಾಸಕರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. 12ನೇ ಸ್ಥಾನದಲ್ಲಿ ಭಟ್ಕಳ ಶಾಸಕ ಮಂಕಾಳು ವೈದ್ಯ ಅವರ ಹೆಸರಿದ್ದು, ಮಂಕಾಳು ವೈದ್ಯ ಅವರ ಜೊತೆ ಬೆಂಬಲಿಗರು ಖುಷಿಯಲ್ಲಿದ್ದರು. ಅದಾಗಿ, ಒಂದು ತಾಸಿನ ನಂತರ ಮತ್ತೊಂದು ಪತ್ರ ಬಂದಿದ್ದು, ಆ ಪತ್ರದಲ್ಲಿ ಮಂಕಾಳು ವೈದ್ಯ ಅವರ ಹೆಸರು ಕಣ್ಮರೆಯಾಗಿತ್ತು. 12ನೇ ಸ್ಥಾನದಲ್ಲಿದ್ದ ಮಂಕಾಳು ವೈದ್ಯರ ಹೆಸರ ಬದಲಾಗಿ ಅಲ್ಲಿ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಹುದ್ದೆ ಕೊಡಲಾಗಿತ್ತು. ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ಸಿಕ್ಕಿದ ಖುಷಿಯಲ್ಲಿದ್ದ ಎಲ್ಲರೂ ಒಮ್ಮೆಲೆ ನಿರಾಶೆವ್ಯಕ್ತಪಡಿಸಿದರು.
ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲ. ಆ ಸಚಿವ ಸ್ಥಾನಪಡೆಯುವುದಕ್ಕಾಗಿ ಕಾಂಗ್ರೆಸ್ ಶಾಸಕರು ಲಾಭಿ ಮಾಡುವುದನ್ನು ಬಿಟ್ಟಿಲ್ಲ. ಅನುಭವ, ಅರ್ಹತೆ, ಅಭಿವೃದ್ಧಿ, ಪಕ್ಷ ಸಂಘಟನೆ ಕೆಲಸದ ಜೊತೆ ಇನ್ನಷ್ಟು ಆಯಾಮಗಳ ಅಡಿ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್’ಗೆ ಒತ್ತಡ ಹಾಕುತ್ತಿದ್ದಾರೆ. ಸಚಿವ ಸ್ಥಾನದ ಹಾವು-ಏಣಿ ಆಟದಲ್ಲಿ ಹೈ ಕಮಾಂಡ್ ಯಾರ ಕಡೆ ಒಲವು ಕೊಡಲಿದೆ? ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.