`ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಭೂಮಿ ಸಾಗುವಳಿದಾರರಿಗೆ ಅಧಿಭೋಗದ ಹಕ್ಕು ನೀಡಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಒಕ್ಕೂಟ ಅಧ್ಯಕ್ಷ ಚಂದ್ರಕಾoತ ಕೊಚರೇಕರ ಅವರು ಪತ್ರ ಬರೆದಿದ್ದಾರೆ. ಆ ಪತ್ರವನ್ನು ಅವರು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರಿಗೂ ಕಳುಹಿಸಿದ್ದು, ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರ ಪ್ರಮುಖ ಸಮಸ್ಯೆಯನ್ನು ಎಲ್ಲರೂ ಸೇರಿ ಬಗೆಹರಿಸಬೇಕು. ಅರ್ಹರು ಅರಣ್ಯ ಭೂಮಿಯ ಅಧಿಭೋಗದ ಹಕ್ಕಿನಿಂದ ವಂಚಿತರಾಗದoತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟ ಪ್ರಮುಖರೊಂದಿಗೆ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ನಡೆಸಬೇಕು. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಕಾರಣ ಅದನ್ನು ಬಗೆಹರಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಪ್ರಕಾರ ತಿರಸ್ಕೃತಗೊಂಡಿರುವ ಎಲ್ಲ ಅರ್ಜಿಗಳನ್ನು ಪುನರ್ ಪರಿಶೀಲಿಸಲು ಹಾಗೂ ಎಲ್ಲ ಪ್ರಕರಣಗಳಲ್ಲಿ ಜಿಪಿಎಸ್ ಸರ್ವೆಸಹಿತ ಸ್ಥಳದಲ್ಲಿನ ಸಾಂದರ್ಭಿಕ ಸಾಕ್ಷ್ಯಗಳನ್ನು ಮಹಜರು ಪ್ರಕ್ರಿಯೆಯಿಂದ ದೃಢೀಕರಿಸಿ ಅದನ್ನು ಪುರಾವೆಯನ್ನಾಗಿ ಪರಿಗಣಿಸಿ ಅರ್ಹರಿಗೆ ಭೂಮಿಯ ಅಧಿಭೋಗದ ಹಕ್ಕು ನೀಡಲು ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳ ಮೂಲಕ ಕ್ರಮ ಆಗಬೇಕು. ಈ ದಿಶೆಯಲ್ಲಿ ಅಪೂರ್ಣಗೊಂಡಿರುವ ಸ್ಥಳ ಮಹಜರು ಪ್ರಕ್ರಿಯೆಯನ್ನು ನಡೆಸಲು ಕ್ರಮಗಳು ಆಗಬೇಕು. ಜಿಲ್ಲೆಯಲ್ಲಿ ಪ್ರತಿಶತ 90ರಷ್ಟು ಅರಣ್ಯ ಹಕ್ಕು ಪ್ರಕರಣಗಳಲ್ಲಿ ಸ್ಥಳ ಮಹಜರು ನಡೆಸುವದು ಬಾಕಿ ಇದ್ದು ಎಲ್ಲ ಕ್ಷೇಮುಗಳಲ್ಲಿ ಅಲ್ಲಿನ ಸಾಗುವಳಿದಾರರನ್ನು ವಿಶ್ವಾಸಕ್ಕೆ ಪಡೆದು ಅವರ ಸಾಗುವಳಿ ಸ್ಥಳದ ಜಿಪಿಎಸ್ ಸರ್ವೆ ಸಹಿತ ಸ್ಥಳ ಮಹಜರು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರಣ್ಯ ಹಕ್ಕು ಕ್ಷೇಮುಗಳ ಪುನರಪರಿಶೀಲನೆಯಿಂದ 2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಅಧಿಭೋಗದ ಹಕ್ಕು ನೀಡಲು ಪರಿಗಣಿಸಬೇಕು’ ಎಂದವರು ಆಗ್ರಹಿಸಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೂ ಅವರು ಮನವಿ ಸಲ್ಲಿಸಿದ್ದಾರೆ.