ಮೂಲಂಗಿ ಗ್ರಾಮದಲ್ಲಿ ಈ ದಿನ 15 ಅಡಿಯ ಹೆಬ್ಬಾವು ಕುರಿಯನ್ನು ಹಿಡಿದುಕೊಂಡಿದ್ದು, ಜನ ಆ ಕುರಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಕುರಿಯೂ ಬದುಕಲಿಲ್ಲ. ಹಾವಿಗೂ ಆಹಾರ ಸಿಗಲಿಲ್ಲ!
ಮೂಲಂಗಿ ಗ್ರಾಮದಲ್ಲಿ ದೊಡ್ಡ ಹಾವು ಬಂದಿದೆ ಎಂಬ ಸುದ್ದಿ ಎಲ್ಲಡೆ ಹರಡಿತ್ತು. ಆ ಹಾವು ನೋಡಲು ಅನೇಕರು ಜಮಾಯಿಸಿದ್ದರು. ಆದರೆ, ಅಷ್ಟರಲ್ಲಿ ಆ ಹಾವು ಅಲ್ಲಿದ್ದ ಕುರಿಯೊಂದನ್ನು ಅಪ್ಪಿಕೊಂಡಿದ್ದು, ಎಷ್ಟು ಸಾಹಸ ಮಾಡಿದರೂ ಆ ಕುರಿಯನ್ನು ಹಾವಿನಿಂದ ಬಿಡಿಸಲು ಆಗುತ್ತಿರಲಿಲ್ಲ. ಹಾವು ಕುರಿ ನುಂಗಲು ಮುನ್ನುಗ್ಗುತ್ತಿದ್ದು, ಜನ ಸಹ ಹಾವನ್ನು ಕುರಿಯಿಂದ ಬೇರೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಕೊನೆಗೆ ಹಾವು ಕುರಿಯಿಂದ ಬೇರೆಯಾಯಿತು. ಆ ಹಗ್ಗ ಜಗ್ಗಾಟದಲ್ಲಿ ಕುರಿಯೂ ಸಾವನಪ್ಪಿತ್ತು.
ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಆ ಹಾವನ್ನು ತಮ್ಮ ವಶಕ್ಕೆಪಡೆದರು. ಉರಗ ತಜ್ಞ ರಾಜಕ್ ಶಾ ಅವರ ಶಿಷ್ಯ ಮಲಿಕ್ ರಿಹಾನ್ ಅವರು ಕಾರ್ಯಾಚರಣೆಗೆ ಕೈ ಜೋಡಿಸಿದರು. ಆ ಹೆಬ್ಬಾವನ್ನು ಅರಣ್ಯಕ್ಕೆ ಕರೆದೊಯ್ದು ಬಿಡಲಾಗಿದ್ದು, ಇದಕ್ಕೂ ಮುನ್ನ ಹಾವಿನ ವಿಶೇಷಗಳ ಬಗ್ಗೆ ಜನರಿಗೆ ಅಲ್ಲಿದ್ದವರು ಅರಿವು ಮೂಡಿಸಿದರು. ಅರಣ್ಯಾಧಿಕಾರಿ ಜಗದೀಶ್, ಪಾರ್ಕ್ ಗಾರ್ಡ್ ದೀಪಕ್ ಸೇರಿ ಇತರರು ಕಾರ್ಯಾಚರಣೆಯಲ್ಲಿದ್ದರು.