ಸಾರ್ವಜನಿಕರಿಗ ತೊಂದರೆ ನೀಡುತ್ತಿದ್ದ ಪುಂಡ-ಪೋಕರಿಗಳನ್ನು ಪ್ರಶ್ನಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆದಿದೆ. ಐವರು ಸೇರಿ ಮುರುಡೇಶ್ವರ ಪೊಲೀಸರಿಗೆ ಹೊಡೆದಿದ್ದು, ಹೊಡೆದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಮಾಹಿತಿಗಳ ಪ್ರಕಾರ, ಅಗಸ್ಟ 8ರ ರಾತ್ರಿ ಮುರುಡೇಶ್ವರ ನಾಕಾ ಬಳಿಯ ಪ್ರಜಾ ಜ್ಯೂಸ್ ಸೆಂಟರ್ ಎದುರು ಗಲಾಟೆ ನಡೆದಿದೆ. ಆ ಗಲಾಟೆ ನಡೆಯದಂತೆ ಪೊಲೀಸರು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಆ ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಗಲಾಟೆ ಮಾಡುತ್ತಿದ್ದವರು ಮುಗಿ ಬಿದ್ದಿದ್ದಾರೆ. ವಿವಿಧ ಆಯುಧ ಬಳಸಿ ಪೊಲೀಸರಿಗೆ ಹೊಡೆದಿದ್ದಾರೆ.
ರಾಜು ನಾಯ್ಕ, ಪೃಥ್ವಿಕ್ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮೊದಲು ಪೊಲೀಸರಿಗೆ ಫೋನ್ ಬಂದಿದೆ. ಆ ಮಾಹಿತಿ ಆಧರಿಸಿ ಪೊಲೀಸರು ಅಲ್ಲಿಗೆ ಹೋಗಿದ್ದಾರೆ. ಆಗ, ಆರೋಪಿತರು ಅಲ್ಲಿದ್ದ ಮನೋಜ ನಾಯ್ಕ ಎಂಬಾತರಿಗೆ ಚಾಕು ಚುಚ್ಚುವ ಪ್ರಯತ್ನ ಮಾಡಿದ್ದು ಅದನ್ನು ಪೊಲೀಸರು ತಪ್ಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ಐದು ಜನ ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ಆರೋಪಿ ಪೃಥ್ವಿಕ್ ನಾಯ್ಕ ಅವರು ಕೈಯಲ್ಲಿದ್ದ ಚಾಕುವಿನಿಂದ ಕಾನ್‌ಸ್ಟೇಬಲ್ ವಿನಾಯಕ ಶೆಟ್ಟಿ ಅವರ ಎಡ ಅಂಗೈಗೆ ಚುಚ್ಚಿದ್ದಾರೆ. ಇನ್ನೊಬ್ಬ ಆರೋಪಿ ರಾಜು ನಾಯ್ಕ ಅವರು ಹೆಡ್ ಕಾನ್‌ಸ್ಟೇಬಲ್ ಸಂಗಪ್ಪ ಹರಿಜನ ಅವರ ಬಲಗೈ ಮೇಲ್ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದಿದ್ದಾರೆ.
ಅದಾದ ನಂತರ ಆ ಐದು ಜನ ಪೊಲೀಸರಿಗೆ ಬೈದು, ಬಿಳಿ ಬಣ್ಣದ ಶಿಪ್ಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆ ಐವರ ವಿರುದ್ಧ ಕೇಸು ದಾಖಲಿಸಿದ್ದಾರೆ.