ಕರಾವಳಿ ಭಾಗದ ಹರಿಕಂತ್ರ, ಅಂಬಿಗ, ಕೊಂಕಣ ಖಾರ್ವಿ, ಗಾಬಿತ, ಪಾಗಿ, ಬೋಯಿ ಹಾಗೂ ಮಲೆನಾಡು ಭಾಗದಲ್ಲಿ ಕೋಳಿ, ಸುಣಗಾರ, ಗಂಗಾಮತ ಸೇರಿ ಅನೇಕ ಮೀನುಗಾರ ಸಮುದಾಯದವರು ಕುಮಟಾದಲ್ಲಿ ಸಭೆ ಮಾಡಿದ್ದಾರೆ. ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದವರು ಆಗ್ರಹಿಸಿದ್ದಾರೆ.
`ಈ ಬಗ್ಗೆ ಅನೇಕ ವರ್ಷಗಳಿಂದ ಹೋರಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟವನ್ನು ಇನ್ನಷ್ಟು ತೀವೃಗೊಳಿಸೋಣ’ ಎಂದು ಸಭೆಯಲ್ಲಿ ಭಾಗವಹಿಸಿದವರು ಸಂದೇಶ ರವಾನಿಸಿದ್ದಾರೆ. ಕುಮಟಾದ ಪುರಭವನದಲ್ಲಿ `ಗಂಗಾಪುತ್ರ ಗರ್ಜನೆ ಪಡೆ’ ಎಂಬ ಸಂಘಟನೆ ಮೂಲಕ ಈ ಸಭೆ ನಡೆದಿದ್ದು, ಮೀನುಗಾರ ಸಮುದಾಯಗಳ ವಿಶೇಷ ಸಾಮೂಹಿಕ ಜನಜಾಗೃತಿಗಾಗಿ ಗಣ್ಯರು ಕರೆ ನೀಡಿದ್ದಾರೆ. `ಉತ್ತರ ಕನ್ನಡವನ್ನು ಸೇರಿ ರಾಜ್ಯದ 39 ಕಡೆ ಮೀನುಗಾರ ಸಮುದಾಯದವರಿದ್ದಾರೆ. ಅವರೆಲ್ಲರೂ ಉತ್ತಮ ಶಿಕ್ಷಣಪಡೆದು ಸಂಘಟಿತರಾಗುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಹಕ್ಕುಗಳನ್ನು ಪಡೆಯಬೇಕು. ಅದಕ್ಕಾಗಿ ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ
`ಸಂಘಟನಾತ್ಮಕ ಹೋರಾಟ ನಡೆಯದ ಕಾರಣ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಭವಿಷ್ಯದಲ್ಲಿ ಎಲ್ಲರೂ ಒಟ್ಟಾಗಿ ಈ ಬಗ್ಗೆ ಹೋರಾಡೋಣ’ ಎಂದು ಸಭೆಯಲ್ಲಿದ್ದವರು ಹೇಳಿದ್ದಾರೆ. ಬೇರೆ ಬೇರೆ ಊರುಗಳಿಂದ ಬಂದಿದ್ದ ಪ್ರಮುಖರಾದ ಗುಂಡು ಐನಾಪುರ, ಜಿ ಟಿ ವೆಂಕಟೇಶ, ಬಿ ಜಿ ಸುಣಗಾರ, ಯಮುನಪ್ಪ ಮಡಿಕೇರಿ ಬಾಗಲಕೋಟೆ, ಸಂತೆಕಸಲಗೆರೆ ಬಸವರಾಜು ಅವರ ಜೊತೆ ಸ್ಥಳೀಯರಾದ ಬೀರಪ್ಪ ಹರಿಕಂತ್ರ, ನೀಲಕಂಠ ಬಲೆಗಾರ, ರಮೇಶ ಖಾರ್ವಿ ಭಟ್ಕಳ, ರಾಘವೇಂದ್ರ ಜಾದವ, ಗಾಬಿತ ಸಮಾಜದ ಸುಧಾಕರ ತಾರಿ, ಗಣಪತಿ ಮಾಂಗ್ರೆ, ಶ್ರೀಕಾಂತ ದುರ್ಗೇಕರ, ಗಾಂಗಾಧರ ಅಂಬಿಗ, ಅಜಿತ್ ತಾಂಡೇಲ ಹೊನ್ನಾವರ, ಮಂಜುನಾಥ ಖಾರ್ವಿ ಇತರರು ಒಗ್ಗಟ್ಟಿನ ಹೋರಾಟಕ್ಕೆ ಕರೆ ನೀಡಿದ್ದಾರೆ.