ರಸ್ತೆ ಹಾಳಾಗಿ ಐದು ವರ್ಷ ಕಳೆದರೂ ದುರಸ್ಥಿ ನಡೆದಿಲ್ಲ ಎಂದು ಹಳೆ ದಾಂಡೇಲಿ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ರಸ್ತೆಯ ಮೇಲೆ ಕುಳಿತು ಅಲ್ಲಿನವರು ಪ್ರತಿಭಟನೆಯನ್ನೂ ಮಾಡಿದ್ದಾರೆ.
ಹಳೆ ದಾಂಡೇಲಿಯಲ್ಲಿ ಹದಗೆಟ್ಟ ರಸ್ತೆ ವಿರುದ್ಧ ನಿವಾಸಿಗಳ ಆಕ್ರೋಶ ಹೆಚ್ಚಾಗಿದೆ. ಐದು ವರ್ಷಗಳಿಂದ ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ ಎಂದು ಜನ ದೂರಿದ್ದಾರೆ. ರಸ್ತೆ ದುರಸ್ತಿಗೆ ಆಗ್ರಹಿಸಿ ಹಳೆ ದಾಂಡೇಲಿಯಲ್ಲಿ ರಸ್ತೆ ತಡೆ ಪ್ರತಿಭಟನೆ ಮಾಡಿದ್ದಾರೆ. `ಹಾಳಾದ ರಸ್ತೆಗೆ ತೇಪೆ ಹಚ್ಚುವ ಕೆಲಸವೂ ನಡೆದಿಲ್ಲ. ಸದ್ಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಯುಸಿಡಿ ಕಾಮಗಾರಿಯಿಂದ ರಸ್ತೆ ಮತ್ತಷ್ಟು ಹಾಳಾಗಿದೆ’ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
`ಈ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದೆ. ಗುಂಡಿಗಳಲ್ಲಿ ಮಳೆ ನೀರು ತುಂಬಿ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ಈ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. `ನಿತ್ಯ ಸಾವಿರಾರು ಜನ ಓಡಾಡುವ ಪ್ರಮುಖ ರಸ್ತೆಯಾಗಿದ್ದರೂ ನಿರ್ವಹಣೆ ಸರಿಯಾಗಿಲ್ಲ. ಅದರಿಂದ ಇಲ್ಲಿನ ಸರ್ಕಾರಿ ಪದವಿ ಕಾಲೇಜು, ಧಾರ್ಮಿಕ ಸ್ಥಳಗಳು ಹಾಗೂ ಬಸ್ ಡಿಪೋ ಸಂಚಾರಕ್ಕೆ ಸಮಸ್ಯೆಯಾಗಿದೆ’ ಎಂದು ವಿವರಿಸಿದ್ದಾರೆ.
`ಹಲವು ಬಾರಿ ಮನವಿ ಹಾಗೂ ಪ್ರತಿಭಟನೆ ನಡೆಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ನಮಗೆ ತಾತ್ಕಾಲಿಕ ಗುಂಡಿ ಮುಚ್ಚುವ ಕೆಲಸ ಬೇಡ, ಶಾಶ್ವತ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು’ ಎಂದು ಆಗ್ರಹಿಸಿದ್ದಾರೆ. `ರಸ್ತೆ ನಿರ್ಮಾಣಕ್ಕೆ ಈಗಾಗಲೇ 81 ಲಕ್ಷ ರೂಪಾಯಿ ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣವಾಗಿದೆ. ಮುಂದಿನ 15 ದಿನಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ’ ಎಂದು ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ಅವರು ಭರವಸೆ ನೀಡಿದ್ದಾರೆ. ಅಧಿಕಾರಿಗಳ ಆಶ್ವಾಸನೆ ನಂತರ ಪ್ರತಿಭಟನೆ ಮುಗಿದಿದ್ದು, ಅದರ ಬೆನ್ನಲ್ಲೆ ನಗರಸಭೆ ಸಿಬ್ಬಂದಿಯಿAದ ತಾತ್ಕಾಲಿಕ ರಸ್ತೆ ದುರಸ್ತಿ ಕಾರ್ಯ ಶುರುವಾಗಿದೆ.