ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಮಾರ್ಗಪಟ್ಟಿ ಹೊರ ಬಿದ್ದಿದ್ದು, ಹುಬ್ಬಳ್ಳಿಯಿಂದ ಯಲ್ಲಾಪುರದವರೆಗೂ ಕ್ರಮಬದ್ಧವಾಗಿಯೇ ಇದ್ದ ಊರುಗಳ ಯಾದಿ ಅರಬೈಲ್ ನಂತರ ಹಾದಿ ತಪ್ಪಿದೆ. ಕೋಮಡಿಯಿಂದ ಅರಬೈಲಿಗೆ ಬಂದ ರೈಲ್ವೆ ಊರಿನ ಯಾದಿ ನಂತರ ದಿಢೀರ್ ಆಗಿ ತೆಲಂಗಾರ್ ಕಡೆ ತಿರುಗಿದ್ದು ಹೇಗೆ? ಮತ್ತೆ ರಾಷ್ಟ್ರೀಯ ಹೆದ್ದಾರಿ ಕಡೆ ತಿರುಗಿದ ಭೂ ಸ್ವಾಧೀನ ಯಾದಿ ಕಳಚೆ-ಮಾವಿನಮನೆ ಕಡೆ ಹೋಗಿದ್ದು ಏತಕೆ? ಎಂಬ ಪ್ರಶ್ನೆ ಉದ್ಬವಿಸಿದೆ.
ಉತ್ತರ ಕರ್ನಾಟಕವನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಹುಬ್ಬಳ್ಳಿ – ಅಂಕೋಲಾ ರೈಲ್ವೆ ಯೋಜನೆ ಮುನ್ನೆಲೆಗೆ ಬಂದಿದೆ. ಅನೇಕ ವರ್ಷಗಳ ಹೋರಾಟ, ಪರ ವಿರೋಧ ಚರ್ಚೆ, ಅಡ್ಡಿ-ಆತಂಕ-ತಕರಾರುಗಳ ನಡುವೆ ಈ ದಿನ ರೈಲು ಮಾರ್ಗದ ಬಗ್ಗೆ ರೈಲ್ವೆ ಇಲಾಖೆಯೇ ಅಧಿಕೃತ ಪ್ರಕಟಣೆ ಹೊರಡಿಸಿದೆ. ಅದೇ ಆಧಾರದಲ್ಲಿ ವಿವಿಧ ಮಾಧ್ಯಮಗಳು ವರದಿ ಪ್ರಸಾರ ಮಾಡಿದ್ದು, ಭೂಸ್ವಾಧೀನ ಅಧಿಸೂಚನೆಯಲ್ಲಿನ ಅಂಶಗಳು ಗೊಂದಲ ಮೂಡಿಸಿವೆ. ಹುಬ್ಬಳ್ಳಿಯಿಂದ ಯಲ್ಲಾಪುರದ ಅರಬೈಲಿನವರೆಗೂ ಊರುಗಳ ಹೆಸರು ಸರಿಸುಮಾರಾಗಿ ಕ್ರಮಬದ್ಧವಾಗಿಯೇ ಇದ್ದು, ಅದಾದ ನಂತರ ಭೂ ಸ್ವಾಧೀನ ಮಾಡುವ ಕ್ಷೇತ್ರಗಳ ಹೆಸರು ಕ್ರಮಬದ್ಧವಾಗಿಲ್ಲದಿರುವುದು ಗೊಂದಲಕ್ಕೆ ಕಾರಣ.
ಹುಬ್ಬಳ್ಳಿ ನಗರಪಾಲಿಕೆಯಿಂದ ಹೊರಟ ಭೂ ಸ್ವಾಧೀನದ ಯಾದಿ ಯಲ್ಲಾಪುರದ ಹೊಸಳ್ಳಿಯವರೆಗೆ ಬಂದಿದೆ. ಅಲ್ಲಿಂದ ಮುಂದೆ ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದ್ಗುಳಿ, ಸಬಗೇರಿ, ಗೋಪಡಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೊಮಡಿ, ಅರಬೈಲಿನವರೆಗೆ ಕ್ರಮಬದ್ಧವಾಗಿದೆ. ಅದಾದ ನಂತರ ಅರಬೈಲಿನಿಂದ ನೇರವಾಗಿ ತೆಲಂಗಾರಿಗೆ ಬಂದಿದ್ದು, ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಅರಬೈಲು ಹಾಗೂ ತೆಲಂಗಾರ್ ನಡುವಿನ ಪ್ರದೇಶದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಭೂ ಸ್ವಾಧೀನ ಪ್ರದೇಶ ಪಟ್ಟಿಯಲ್ಲಿ ತೆಲಂಗಾರ್ ನಂತರ ಮತ್ತೆ ವಜ್ರಳ್ಳಿ, ಹೊನಗದ್ದೆ, ಅಂಬಗಾವ ಊರುಗಳ ಹೆಸರಿದ್ದು, ಮತ್ತೆ ಈ ಮಾರ್ಗ ಗುಳ್ಳಾಪುರದ ಹೆಸರು ಸೂಚಿಸಿದೆ. ಅರಬೈಲಿನಿಂದ ಗುಳ್ಳಾಪುರಕ್ಕೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಿದ್ದು, ಎಲ್ಲಡೆ ಸರಿ ಸುಮಾರಾಗಿ ರಾಷ್ಟಿçÃಯ ಹೆದ್ದಾರಿ ಅಂಚಿನ ಪ್ರದೇಶದಲ್ಲಿಯೇ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಆದರೆ, ಕೊಮಡಿ ನಂತರ ದಿಢೀರ್ ಆಗಿ ತೆಲಂಗಾರ್ ಪ್ರದೇಶ ಕಾಣಿಸಿದ್ದು, ಅಲ್ಲಿನ ವ್ಯತ್ಯಾಸದ ಬಗ್ಗೆ ಚರ್ಚೆ ಶುರುವಾಗಿದೆ. ಗುಳ್ಳಾಪುರದ ನಂತರ ಕೊಡ್ನಗದ್ದೆ ಪ್ರದೇಶ ಕಾಣಿಸಿದ್ದು, ಅದಾದ ನಂತರ ಕಳಚೆ, ಮಾವಿನಮನೆ ಊರುಗಳನ್ನು ಹೆಸರಿಸಲಾಗಿದೆ. ನಂತರ ಅಂಕೋಲಾ ತಾಲೂಕಿನ ಸುಂಕಸಾಳ, ಹೆಬ್ಬುಳ ಗ್ರಾಮಗಳ ಮಾರ್ಗವಾಗಿ ಭೂ ಸ್ವಾಧೀನ ಪಟ್ಟಿ ಮುಂದುವರೆದಿದೆ.
ಹುಬ್ಬಳ್ಳಿ, ಕಲಘಟಗಿ, ಯಲ್ಲಾಪುರ ಹಾಗೂ ಅಂಕೋಲಾ ತಾಲೂಕುಗಳ ವ್ಯಾಪ್ತಿಯಲ್ಲಿ ರೈಲ್ವೆ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ನೈಋತ್ಯ ರೈಲ್ವೆ ವಲಯ ಅಧಿಸೂಚನೆ ಹೊರಡಿಸಿದ್ದು ಮನೆ, ಜಮೀನು, ತೋಟ ಹಾಗೂ ಬದುಕಿನ ಮೇಲೆ ಯೋಜನೆಯ ಪರಿಣಾಮ ಏನಾಗಬಹುದು ಎಂಬ ಚಿಂತೆ ಈ ಭಾಗದ ಗ್ರಾಮಸ್ಥರನ್ನು ಕಾಡುತ್ತಿದೆ. ಒಟ್ಟು 163 ಕಿ.ಮೀ ಉದ್ದದ ವಿದ್ಯುದ್ದೀಕರಣ ಸಹಿತ ಹೊಸ ಬ್ರಾಡ್ಗೇಜ್ ರೈಲು ಮಾರ್ಗ ಇದಾಗಿದ್ದು, ಯೋಜನೆಯ ಅಂದಾಜು ವೆಚ್ಚ ?16,435 ಕೋಟಿ ಎಂದು ತಿಳಿಸಲಾಗಿದೆ. ಯೋಜನೆಗಾಗಿ ಹುಬ್ಬಳ್ಳಿ ತಾಲೂಕಿನ 13, ಕಲಘಟಗಿ ತಾಲೂಕಿನ 13, ಯಲ್ಲಾಪುರ ತಾಲೂಕಿನ 24 ಹಾಗೂ ಅಂಕೋಲಾ ತಾಲೂಕಿನ 16 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಯಲ್ಲಾಪುರ ತಾಲೂಕಿನ ಹೊಸಳ್ಳಿ, ಕಿರವತ್ತಿ, ಕೋಳಿಕೇರಿ, ರಾಮನಕೊಪ್ಪ, ಕನ್ನಡಗಲ್, ಸಹಸ್ರಳ್ಳಿ, ಕೊಂಡೆಮನೆ, ಯಲ್ಲಾಪುರ, ಚಂದಗುಳಿ, ಸಬಗೇರಿ, ಗೋಪದಮನೆ, ಹಿತ್ತಲಕಾರಗದ್ದೆ, ಇಡಗುಂದಿ, ಜೋಗದಮನೆ, ಕೋಮಡಿ, ಅರಬೈಲ, ತೇಲಂಗಾರ, ವಜ್ರಳ್ಳಿ, ಹೊನ್ನಗದ್ದೆ, ಅಂಬಗಾoವ, ಗುಳ್ಳಾಪುರ, ಕೊಡ್ಲಗದ್ದೆ, ಕಳಚೆ ಹಾಗೂ ಮಾವಿನಮನೆ ಗ್ರಾಮಗಳು ಅಧಿಸೂಚನೆಯ ವ್ಯಾಪ್ತಿಯಲ್ಲಿವೆ. ಅಂಕೋಲಾ ತಾಲೂಕಿನ ಸುಂಕಸಾಳ, ಕಟ್ಟಿನಹಕ್ಕಲು, ಹೆಬ್ಬುಳ, ಕವಳಳ್ಳಿ, ಅಗಸೂರ, ಹೆಗ್ಗಾರಮಕ್ಕಿಗದ್ದೆ, ಅದ್ದೂರ, ನಾವಗದ್ದೆ, ಬೊಗ್ರಿಬೈಲ್, ಅಲಗೇರಿ, ಶಿರಕುಳಿ, ಬಾಳೆಗುಳಿ, ಶೆಡಗೇರಿ, ಹೊಸಗದ್ದೆ, ಬೋಳೆ ಹಾಗೂ ಅಂಕೋಲಾ ಗ್ರಾಮಗಳ ವ್ಯಾಪ್ತಿಯಲ್ಲೂ ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಹೊರಬಿದ್ದಿದೆ.