ಸೈಬರ್ ವಂಚನೆ, ಸಂಚಾರಿ ನಿಯಮ ಪಾಲನೆ ಹಾಗೂ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕುರಿತು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಪೊಲೀಸರು ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ. ಈ ಮೂರು ವಿಷಯಗಳ ಕುರಿತು ರೀಲ್ಸ್ ಮಾಡಿ, ಅದನ್ನು ಕಳುಹಿಸಿದವರಿಗೆ ಪಾರಿತೋಷಕ ನೀಡುವುದಾಗಿ ಘೋಷಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ಸೈಬರ್ ಅಪರಾಧ ಪ್ರಮಾಣ ಹೆಚ್ಚಾಗಿದೆ. ಮಾದಕ ವ್ಯಸನಗಳ ವಿರುದ್ಧ ಪೊಲೀಸರು ಆಂದೋಲನ ನಡೆಸುತ್ತಿದ್ದಾರೆ. ಇದರೊಂದಿಗೆ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವುದು ಸವಾಲಾಗಿ ಪರಿಣಮಿಸಿದೆ. ಈ ಎಲ್ಲಾ ಹಿನ್ನಲೆ ಈ ಮೂರು ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ವಿಡಿಯೋ ಸಂದೇಶ ರವಾನೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಆ ಹಿನ್ನಲೆ ಕ್ರಿಯಾತ್ಮಕವಾಗಿ ರೀಲ್ಸ್ ಮಾಡುವವರಿಗಾಗಿ ವಿಶೇಷ ಆಹ್ವಾನ ನೀಡಲಾಗಿದ್ದು, ಪ್ರತಿಯೊಬ್ಬರಲ್ಲಿ ಅಡಗಿದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಈ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರತಿಯೊಬ್ಬರು ಈ ಮೂರು ವಿಷಯಗಳ ಬಗ್ಗೆಯೂ ಪ್ರತ್ಯೇಕವಾಗಿ ವಿಡಿಯೋ ಮಾಡಬಹುದಾಗಿದೆ. ವಿಡಿಯೋಗಳು 90 ಸೆಕೆಂಡ್ ಒಳಗಿರಬೇಕು. ಗುಣಮಟ್ಟದಿಂದ ಕೂಡಿರಬೇಕು ಎಂಬ ಸೂಚನೆಯಿದೆ. ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ವಿಡಿಯೋ ಸಿದ್ಧಪಡಿಸಬೇಕು. ವಿಡಿಯೋ ಸ್ವಂತದ್ದಾಗಿರಬೇಕು. ಯಾವುದೇ ಬಗೆಯ ಅಶ್ಲೀಲ, ಅವಹೇಳನಕಾರಿ ಹಾಗೂ ಬೇರೆಯವರ ರಾಜಕೀಯ-ಧಾರ್ಮಿಕ ಭಾವನೆಗೆ ಧಕ್ಕೆ ಬರುವ ಹಾಗಿರಬಾರದು ಎಂಬ ನಿಯಮಗಳಿವೆ.
ಸ್ಪರ್ಧಿಗಳು ತಮ್ಮ ವಿಡಿಯೋಗಳನ್ನು Facebook Instagram & Youtube ಮೂಲಕ ಪ್ರಕಟಿಸಬೇಕು. ಪ್ರಸಾರ ಮಾಡಿದ ವಿಡಿಯೋಗೆ ಎಂಬ ಹ್ಯಾಶ್‌ಟ್ಯಾಗ್ ಬಳಸಬೇಕು. ಜೊತೆಗೆ #uttara kannada district police ಅನ್ನು ಟ್ಯಾಗ್ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವಿಡಿಯೋ ಲಿಂಕ್ ಅಥವಾ ಮಾಹಿತಿಯನ್ನು ಜಿಲ್ಲಾ ಸೋಶಿಯಲ್ ಮೀಡಿಯಾ ಸೆಲ್‌ನ 8277988311 ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ಸೆಪ್ಟೆಂಬರ್ 20, 2026 ಸ್ಪರ್ಧೆಗೆ ವಿಡಿಯೋ ಸಲ್ಲಿಸಲು ಕೊನೆ ದಿನ.
ವಿಡಿಯೋಗಳ ಮೌಲ್ಯಮಾಪನದಲ್ಲಿ ಸಾಮಾಜಿಕ ಜಾಗೃತಿ ಹಾಗೂ ಸಂದೇಶ, ವಿಷಯದ ಪ್ರಸ್ತುತತೆ ಮತ್ತು ಪ್ರಭಾವ, ಸೃಜನಶೀಲತೆ ಹಾಗೂ ಕಥಾವಸ್ತು, ವಿಡಿಯೋ ಗುಣಮಟ್ಟ ಮತ್ತು ಪ್ರಸ್ತುತಿ ಹಾಗೂ ಸಾರ್ವಜನಿಕ ಸ್ಪಂದನೆಗೆ ತಲಾ 20 ಅಂಕಗಳoತೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ. ಅತ್ಯುತ್ತಮ ವಿಡಿಯೋಗಳಿಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಆಯ್ಕೆಯಾಗುವ ಅತ್ಯುತ್ತಮ ವಿಡಿಯೋಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗುತ್ತದೆ.