`ನದಿ ತಿರುವು ಯೋಜನಾ ವಿರೋಧಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವದು ಅನಿವಾರ್ಯ’ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಹೋರಾಟದ ಕುರಿತು ವಿಶೇಷ ಸಭೆ ನಡೆಸಿದ ಅವರು `ಈ ಹೋರಾಟಕ್ಕೆ ಕರಾವಳಿ ಭಾಗದವರು ಕೈ ಜೋಡಿಸಬೇಕು’ ಎಂದು ಕರೆ ನೀಡಿದ್ದಾರೆ.
`ಸಮರೋಪಾದಿಯಲ್ಲಿ ನಮ್ಮ ಚಳುವಳಿಯನ್ನು ತೀವ್ರಗೊಳಿಸಬೇಕಿದೆ. ಮುಖ್ಯವಾಗಿ ಕರಾವಳಿ ಭಾಗದ ಜನರು ಸಂಪೂರ್ಣ ಕೈಜೋಡಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕಿದೆ’ ಎಂದು ಶ್ರೀಗಳು ಹೇಳಿದ್ದಾರೆ. ಈ ಹಿನ್ನಲೆ ಸೆಪ್ಟೆಂಬರ್ 3ರಂದು ಗೋಕರ್ಣ, ಕಾರವಾರ ಚಲೋ, ಅಕ್ಟೋಬರ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ, ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸ್ತಾ ರೋಖೋ ಸರಣಿ ಚಳುವಳಿಯನ್ನು ವ್ಯವಸ್ಥಿತವಾಗಿ ನಡೆಸಲು ಸಭೆ ನಿರ್ಣಯಿಸಿದೆ. ಜೊತೆಯಲ್ಲಿ ಕಾನೂನು ಹೋರಾಟವನ್ನು ನಡೆಸಲು ಸಭೆ ತೀರ್ಮಾನಿಸಿದೆ.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ `ಬೆಂಗಳೂರಿನಲ್ಲಿ ಏನ್ ಡಬ್ಲ್ಯೂಡಿಎ ವಿಜ್ಞಾನಿ ಗಳೊಂದಿಗೆ ನಡೆದ ಚರ್ಚೆಯಲ್ಲಿ ನಮ್ಮ ನಿಯೋಗದಲ್ಲಿದ್ದ ತಜ್ಞರು ಮಂಡಿಸಿದ ಪ್ರಶ್ನೆಗಳಿಗೆ ಸಂಸ್ಥೆಯ ವಿಜ್ಞಾನಿಗಳು ನಿರುತ್ತರರಾದರು’ ಎಂಬ ವಿಷಯ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಜನಜಾಗೃತಿ ಕೈಗೊಂಡ ಪ್ರಮುಖರಾದ ವಿಶ್ವನಾಥ ಶೀಗೆಹಳ್ಳಿ ಮತ್ತು ಪ್ರಮೋದ್ ವೈದ್ಯ ಮತ್ತಿಘಟ್ಟ ಅವರು ಮಾತನಾಡಿ `ಕರಾವಳಿ ಭಾಗದಲ್ಲಿ ಈ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ಇದೆ’ ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ಶ್ರೀಮನ್ ನೆಲೆಮಾವು ಮಠದ ಅಧ್ಯಕ್ಷ ಜಿ ಎಂ ಹೆಗಡೆ ಹೆಗ್ನೂರು, ಹಿರಿಯ ಸಹಕಾರಿ ಎನ್ ವಿ ಹೆಗಡೆ ಮುತ್ತಿಗೆ, ಜಿ ಆರ್ ಹೆಗಡೆ ಬೆಳ್ಳೆಕೆರಿ, ಶಿವಾನಂದ ಕಳವೆ, ಎಂ ಕೆ ಭಟ್ ಯಡ್ಹಳ್ಳಿ, ರಾಘವೇಂದ್ರ ಭಟ್ಟ ಹಾಸಣಗಿ, ನರಸಿಂಹ ಸಾತೊಡ್ಡಿ, ಜಿ ಎನ್ ಹೆಗಡೆ ಕಣ್ಣಿಮನೆ ತಮ್ಮ ಅಭಿಪ್ರಾಯ ಮಂಡಿಸಿದರು. ಸುರೇಶ ಹಕ್ಕಿಮನೆ ಸ್ವಾಗತಿಸಿದರು. ಅನಂತ ಭಟ್ ಹುಳಗೋಳ ವಂದಿಸಿದರು.