ಭಟ್ಕಳದಲ್ಲಿ ಅಲೆದಾಡುತ್ತಿದ್ದ ಭಿಕ್ಷುಕನೊಬ್ಬ ನೀರು ಕೊಟ್ಟು ಉಪಚರಿಸಿದರೂ ಆ ನೀರು ಸೇವಿಸದೇ ಸಾವನಪ್ಪಿದ್ದು, ಆ ಅಪರಿಚಿತ ಭಿಕ್ಷುಕನ ವಾರಸುದಾರರ ಹುಡುಕಾಟ ನಡೆದಿದೆ.
ಮುರುಡೇಶ್ವರ ಬಳಿಯ ಮಾವಳ್ಳಿ-1 ಸಮೀಪದ ನರೇಕುಳಿಯ ನಾಗರಾಜ ದೇವಾಡಿಗ ಅವರು ಶಿರಾಳಿಯಲ್ಲಿ ಶ್ರೀವಲ್ಲಿ ಸೂಪರ್ ಮಾರ್ಕೇಟ್ ನಡೆಸುತ್ತಿದ್ದಾರೆ. ಅಕ್ಟೊಬರ್ 12ರಂದು ಅಂದಾಜು 55 ವರ್ಷದ ಭಿಕ್ಷುಕ ಆಗಮಿಸಿದರು. ಸೂಪರ್ ಮಾರ್ಕೇಟ್ ಮುಂದೆ ಆಯಾಸಗೊಂಡು ಕುಳಿತಿದ್ದ ಭಿಕ್ಷುಕನಿಗೆ ನಾಗರಾಜ ದೇವಾಡಿಗ ಅವರು ನೀರು ಕೊಟ್ಟರು. ಆತನ ಆರೋಗ್ಯ ವಿಚಾರಿಸಿದರು. ಆದರೆ, ಆತ ಜಾಸ್ತಿ ಮಾತನಾಡಲಿಲ್ಲ. ಕೊಟ್ಟ ನೀರನ್ನು ಕುಡಿಯಲಿಲ್ಲ.
ಆ ದಿನ ರಾತ್ರಿ 11 ಗಂಟೆಗೆ ಸೂಪರ್ ಮಾರ್ಕೇಟಿಗೆ ಬೀಗ ಹಾಕಿ ನಾಗರಾಜ ದೇವಾಡಿಗ ಅವರು ಮನೆಗೆ ಹೋದರು. ಅಕ್ಟೊಬರ್ 13ರ ಬೆಳಗ್ಗೆ 10ಗಂಟೆಗೆ ಅವರು ಸೂಪರ್ ಮಾರ್ಕೇಟ್ ತೆರೆಯಲು ಹೋದಾಗ ಆ ಭಿಕ್ಷುಕ ಅಲ್ಲಿಯೇ ಇದ್ದರು. ಆದರೆ, ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅದಾದ ನಂತರ ಆ ಭಿಕ್ಷುಕ ಸಾವನಪ್ಪಿರುವುದು ಗೊತ್ತಾಯಿತು. ನಾಗರಾಜ ದೇವಾಡಿಗ ಅವರು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ಅಪರಿಚಿತ ಭಿಕ್ಷುಕ ಸಾವನಪ್ಪಿದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದರು.