ಹಳಿಯಾಳದ ಕುಸ್ತಿ ಅಖಾಡದ ಬಳಿ ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ದಾಳಿ ನಡೆದಿದೆ. ಚಾಕು ಚುಚ್ಚಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದು, ಶೋಧ ಮುಂದುವರೆದಿದೆ.
ಬುಧವಾರ ಸಣ್ಣ ವಿಷಯವೊಂದಕ್ಕೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಸಂಜೆ ಪಟ್ಟಣದ ಭಜಂತ್ರಿ ಗಲ್ಲಿಯ ಭರತ ಮೊರೆ (30) ಎಂಬಾತರ ಮೇಲೆ ಚಾಕುವಿನ ದಾಳಿ ನಡೆದಿದೆ. ಈ ದಾಳಿಯಿಂದ ಭರತ ಮೊರೆ ಅವರು ತತ್ತರಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆಪಡೆಯುತ್ತಿದ್ದಾರೆ.
ಭರತ ಮೋರೆ ಅವರ ಎಡ ಭುಜದ ಭಾಗಕ್ಕೆ ತೀವ್ರ ಗಾಯವಾಗಿದೆ. ರಕ್ತ ಸುರಿಯುತ್ತಿದೆ. ಘಟನೆ ನೋಡಿದವರು ತಕ್ಷಣ ಆಂಬುಲೆನ್ಸಿಗೆ ಫೋನ್ ಮಾಡಿದ್ದಾರೆ. ಅವರನ್ನು ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆಯಲ್ಲಿ ಧಾರವಾಡಕ್ಕೆ ರವಾನಿಸಲಾಗಿದೆ. ಚಾಕು ಇರಿತದ ಬಳಿಕ ಆರೋಪಿತ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದು, ಈ ಗಲಾಟೆಗೆ ಕಾರಣ ಏನು? ಎಂದು ಗೊತ್ತಾಗಿಲ್ಲ.
ಹಲ್ಲೆ ನಡೆಸಿದ ವ್ಯಕ್ತಿಯ ಗುರುತು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆಯಿಂದ ಕುಸ್ತಿ ಅಖಾಡದ ಸುತ್ತಮುತ್ತ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.