ಯಲ್ಲಾಪುರದ ಸಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶಗಳ ಸಹಕಾರಿ ಸಂಘದ (ಲ್ಯಾಂಪ್ಸ್) ಕಾರ್ಯವೈಖರಿಯ ಬಗ್ಗೆ ಶೇರುದಾರ ಸದಸ್ಯರಿಂದಲೇ ಆಕ್ಷೇಪವ್ಯಕ್ತವಾಗಿದೆ. ಸೂಚಿಸಿದ ದಿನ ಸರ್ವ ಸಾಧಾರಣ ಸಭೆಯನ್ನು ಸಹ ನಡೆಸದೇ ನಿಯಮಾವಳಿಗಳನ್ನು ಗಾಳಿಗೆ ತೂರಿದ ಆರೋಪ ಇಲ್ಲಿ ವ್ಯಕ್ತವಾಗಿದೆ.
`ಸರ್ಕಾರಿ ನಿಯಮಾವಳಿಯಂತೆ ಪ್ರತಿವರ್ಷ ನಡೆಸಬೇಕಾದ ಸರ್ವ ಸಾಧಾರಣ ಸಭೆಯನ್ನು ಸೆ 24ರಂದು ಯಲ್ಲಾಪುರದ ವೆಂಕಟರಮಣ ಮಠದಲ್ಲಿ ನಡೆಸಲು ಸಂಘದ ಆಡಳಿತ ಮಂಡಳಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಸಭೆಯ ಕರೆಯೋಲೆಯನ್ನೂ ನೀಡಲಾಗಿತ್ತು. ಅದರಂತೆ ಸಭೆಗೆ ಆಗಮಿಸಿದ ಸದಸ್ಯರಿಗೆ ಆಡಳಿತ ಮಂಡಳಿಯ ಸದಸ್ಯರು ಸ್ಥಳದಲ್ಲಿ ಇಲ್ಲದಿರುವುದು ಕಂಡುಬAದಿದ್ದು, ಸಭೆ ನಡೆಯದೆ ವಾಪಸ್ ತೆರಳುವಂತಾಯಿತು’ ಎಂದು ಸದಸ್ಯರು ಹೇಳಿದ್ದಾರೆ. `ಸಭೆ ನಡೆಯುವುದಿಲ್ಲ ಎಂಬ ಮಾಹಿತಿಯನ್ನು ಪೂರ್ವಭಾವಿಯಾಗಿ ಸದಸ್ಯರಿಗೆ ತಿಳಿಸದಿರುವುದು ಕೂಡ ಆಡಳಿತ ಮಂಡಳಿಯ ಕಾರ್ಯವೈಖರಿ ಕುರಿತು ಪ್ರಶ್ನೆ ಮೂಡಿಸಿದೆ ಎಂದು ಕೆಲ ಸದಸ್ಯರು ಆಕ್ಷೇಪವ್ಯಕ್ತಪಡಿಸಿದ್ದಾರೆ. ನಿಗದಿತ ಸಭೆ ನಡೆಯದ ಬಳಿಕವೂ ಮುಂದಿನ ಸಭೆಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡದಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಘದ ಆಡಳಿತ ಮಂಡಳಿಯ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸದಸ್ಯರಲ್ಲಿ ಅನುಮಾನ ಮೂಡಿದ್ದು, ಸಂಘದ ಆಡಳಿತ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ಸಹಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಸಂಘದ ಆರ್ಥಿಕ ಪರಿಸ್ಥಿತಿ, ಆಡಳಿತಾತ್ಮಕ ಕಾರ್ಯವೈಖರಿ ಹಾಗೂ ಸರ್ವ ಸಾಧಾರಣ ಸಭೆ ನಡೆಸದಿರುವುದಕ್ಕೆ ಕಾರಣವೇನು ಎಂಬುದನ್ನು ಸಂಬAಧಿಸಿದ ಅಧಿಕಾರಿಗಳು ಪರಿಶೀಲಿಸಿ, ಸಂಘದ ಸದಸ್ಯರಿಗೆ ವಾಸ್ತವಾಂಶವನ್ನು ತಿಳಿಸಬೇಕು ಎಂದು ಶೇರುದಾರ ಸದಸ್ಯರು ಆಗ್ರಹಿಸಿದ್ದಾರೆ.