ಶಿರಸಿ-ಸಿದ್ದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಓಮಿನಿಯೊಂದು ಬಸ್ಸು ಓವರ್ಟೆಕ್ ಮಾಡಲು ಪ್ರಯತ್ನಿಸಿದ್ದು, ಓವರ್ಟೆಕ್’ಗೆ ಅವಕಾಶ ನೀಡದ ಕಾರಣ ಓಮಿನಿಯಲ್ಲಿದ್ದವರು ಬಸ್ಸಿನ ಚಾಲಕ-ನಿರ್ವಾಹಕರಿಗೆ ಥಳಿಸಿದ್ದಾರೆ. ಈ ಹೊಡೆದಾಟದ ಪ್ರಮುಖ ಮೂರು ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿ ಕಾನಗೋಡಿನ ಭಾಸ್ಕರ ಮಂಜುನಾಥ ಪಟಗಾರ ಅವರು ಕೆಎಸ್ಆರ್ಟಿಸಿ ಬಸ್ಸಿನ ಚಾಲಕರಾಗಿದ್ದಾರೆ. ಅವರು ಶಿರಸಿ-ಸಿದ್ದಾಪುರ ಮಾರ್ಗವಾಗಿ ಬಸ್ಸು ಓಡಿಸುತ್ತಿದ್ದಾರೆ. ಆ ಬಸ್ಸಿಗೆ ಗಣೇಶ ಉಪೇಂದ್ರ ನಾಯ್ಕ ಅವರು ಕಂಡೆಕ್ಟರ್ ಆಗಿದ್ದಾರೆ. ಗುರುವಾರ ಈ ಬಸ್ಸು ಶಿರಸಿ-ಸಿದ್ದಾಪುರ ಮಾರ್ಗವಾಗಿ ಸಂಚರಿಸುತ್ತಿದ್ದು. ಶಿರಸಿ ಮರಾಠಿಕೊಪ್ಪದ ಸಂದೀಪ ಲಕ್ಷಣ ವಾಲ್ಮೀಕಿ ಅವರು ಅದೇ ವೇಳೆ ಓಮಿನಿ ಓಡಿಸಿಕೊಂಡು ಬಂದಿದ್ದಾರೆ. ಆ ಓಮಿನಿಯಲ್ಲಿ ಮರಾಠಿಕೊಪ್ಪದ ಸೈಪ್ ಅಲಿ ಸಯ್ಯದ್ ಹಾಗೂ ಶಿರಸಿ ಮರಿಗುಡ್ಡೆಯ ಹರ್ಷವರ್ಧನ ಕೃಷ್ಣ ನಾಯ್ಕ ಅವರು ಸಹ ಸಂಚಾರ ಮಾಡಿದ್ದಾರೆ.
ಓಮಿನಿಯಲ್ಲಿದ್ದವರು ಬಸ್ಸನ್ನು ಹಿಂದಿಕ್ಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಭಾಸ್ಕರ ಪಟಗಾರ ಅವರು ಅದಕ್ಕೆ ಅವಕಾಶ ಕೊಟ್ಟಿಲ್ಲ. ಇದರಿಂದ ಸಿಟ್ಟಾದ ಸಂದೀಪ ವಾಲ್ಮೀಕಿ ಅವರು ಓಮಿನಿಯನ್ನು ಇನ್ನಷ್ಟು ಜೋರಾಗಿ ಓಡಿಸಿ, ಬಸ್ಸು ಅಡ್ಡ ಹಾಕುವ ಪ್ರಯತ್ನ ಮಾಡಿದ್ದಾರೆ. ನಾಣಿಕಟ್ಟಾದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಇಳಿಯುವಾಗ ಅಲ್ಲಿ ಓಮಿನಿ ಆಗಮಿಸಿದ್ದು, ನಿಂತ ಬಸ್ಸಿನಲ್ಲಿದ್ದ ಕಂಡೆಕ್ಟರರನ್ನು ಎಳೆದ ಆ ಮೂವರು ಗಣೇಶ ನಾಯ್ಕ ಅವರಿಗೆ ಥಳಿಸಿದ್ದಾರೆ. ಸಂದೀಪ ವಾಲ್ಮೀಕಿ ಅವರ ಜೊತೆ ಸೈಪ್ ಸಯ್ಯದ್, ಹರ್ಷವರ್ಧನ ನಾಯ್ಕ ಅವರು ಸೇರಿ ಹಿಗ್ಗಾಮುಗ್ಗ ಹೊಡೆದಿದ್ದಾರೆ. ಕಬ್ಬಿಣದ ಜಾಕ್’ನಿಂದಲೂ ಬಾರಿಸಿದ್ದಾರೆ.
ಈ ಕುರಿತು ಬಸ್ ಚಾಲಕ ಭಾಸ್ಕರ ಪಟಗಾರ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್, ಸಿದಾಪುರ ಪಿಐ ಜಿಬಿ ತಿಪ್ಪೇಸ್ವಾಮಿ ಅವರು ಕಾರ್ಯಾಚರಣೆಗಿಳಿದಿದ್ದಾರೆ. ಪಿಸೈ ನಾಗಪ್ಪ, ಶಾಂತಿನಾಥ ಪಾಸಾನೆ ಅವರ ಜೊತೆ ಪೊಲೀಸ್ ಸಿಬ್ಬಂದಿ ರಮೇಶ ಗೌಡ, ಸುಭಾಶ ನಾಯ್ಕ, ರಮೇಶ ಕುಡಲ, ಮಂಜಪ್ಪ ಟಿ, ರಾಘವೇಂದ್ರ, ಚೇತನ ಹಲಗೇರಿ, ರಾಜು ಎಂ ಗಿರೀಶಯ್ಯ, ಸಂದೀಪ ನಾಯ್ಕ, ಅಭಿಜಿತ್, ಸಂತೋಷ ಮಲ್ಲೂರು ಸೇರಿ ಆ ಮೂವರನ್ನು ಹಿಡಿದಿದ್ದಾರೆ.
ಪೊಲೀಸ್ ಸಿಬ್ಬಂದಿ ಸಂತೋಷ ತಳವಾರ, ಚಂದ್ರಶೇಖರ ನಾಯ್ಕ, ನಾಗರಾಜ ತಿಮ್ಮಾಪುರ, ರವಿ ಕ್ಯಾಲಕೊಂಡ, ವಿನಾಯಕ್ ಮಡಿವಾಳರವರು ತನಿಖೆಗೆ ಸಹಕಾರ ನೀಡಿದ್ದಾರೆ. ಆ ಮೂವರು ಆರೋಪಿತರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನವಿಧಿಸಿದೆ.