ಹೊನ್ನಾವರದ ಅರಣ್ಯ ಅಧಿಕಾರಿಗಳು 160ಕ್ಕೂ ಅಧಿಕ ದೊಡ್ಡ ದೊಡ್ಡ ಸಾಗವಾನಿ ಮರ ಕಟಾವು ಮಾಡಿದ್ದಾರೆ. 20 ಕೋಟಿ ರೂ ಮೌಲ್ಯದ ಮರಗಳನ್ನು ಅವರು ಕಡಿದು ಕಾಡು ನಾಶ ಮಾಡಿದ್ದಾರೆ.
ಹೊನ್ನಾವರದ ಹೆರೆಂಗಡಿ ಗ್ರಾಮ ಪಂಚಾಯತ ಬಳಿಯ ತುಂಬೊಳ್ಳಿ ಗ್ರಾಮದಲ್ಲಿ ದೊಡ್ಡ ದೊಡ್ಡ ಮರಗಳು ನೆಲಕ್ಕೆ ಉರುಳಿದೆ. ನೂರಾರು ವರ್ಷದ ಹಳೆಯ ಮರಗಳನ್ನು ಅಧಿಕಾರಿಗಳು ಕಡಿಸಿದ್ದಾರೆ. 150 ಅಡಿ ಎತ್ತರದ ಮರವೂ ಸಹ ಇದೀಗ ನೆಲಸಮವಾಗಿ ಬಿದ್ದಿದೆ. ಕಟಾವು ಮಾಡಲಾದ ಮರಗಳನ್ನು ಸಾಗಾಟ ಮಾಡುವುದಕ್ಕಾಗಿ ಅಕ್ಕಪಕ್ಕದ ಇನ್ನಿತರ ಅನೇಕ ಗಿಡ-ಮರಗಳನ್ನು ನಾಶ ಮಾಡಿದ್ದಾರೆ. ಮರ ಸಾಗಿಸುವುದಕ್ಕಾಗಿಯೇ ಅರಣ್ಯದಲ್ಲಿ ದೊಡ್ಡ ದೊಡ್ಡ ರಸ್ತೆಯನ್ನು ಸಹ ನಿರ್ಮಿಸಿದ್ದಾರೆ.
ಇಲ್ಲಿ ಮುಖ್ಯವಾಗಿ ಇಳಿಜಾರು ಪ್ರದೇಶದಲ್ಲಿ ಬೆಳೆದು ನಿಂತಿದ್ದ ಸಾಗವಾನಿ ಮರ ಕಟಾವು ನಡೆದಿದೆ. ಇಳಿಜಾರು ಪ್ರದೇಶದಲ್ಲಿ ಭೂ ಸವಕಳಿ ನಡೆಯದಂತೆ ಮರದ ಬೇರುಗಳು ಮಣ್ಣುಗಳನ್ನು ಹಿಡಿದುಕೊಂಡಿದ್ದು, ಮರ ಕಟಾವು ಪ್ರಕ್ರಿಯೆಯಿಂದ ಭೂ ಕುಸಿತದ ಆತಂಕ ಶುರುವಾಗಿದೆ. ಗಿಡ ನೆಡಬೇಕಾದ ಮಹತ್ವದ ಜವಾಬ್ದಾರಿ ಹೊತ್ತ ಅರಣ್ಯ ಇಲಾಖೆಯೇ ಮುಂದೆ ನಿಂತು ದೊಡ್ಡ ದೊಡ್ಡ ಮರ ಕಟಾವು ನಡೆಸಿರುವುದಕ್ಕೆ ಆಕ್ಷೇಪವ್ಯಕ್ತವಾಗಿದೆ.
ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಸ್ಥಳ ಭೇಟಿ ಮಾಡಿದ್ದಾರೆ. ದೊಡ್ಡ ದೊಡ್ಡ ಮರ ಕಡಿತವಾಗಿರುವುದನ್ನು ನೋಡಿ ಅವರು ಕಂಗಾಲಾಗಿದ್ದಾರೆ. `ಅತ್ಯಂತ ಹೆಚ್ಚಿನ ಅರಣ್ಯ ಸಾಂದ್ರತೆ ಇರುವಂತ ಪ್ರದೇಶದಲ್ಲಿ ಅನಗತ್ಯವಾಗಿ ಮರ ಕಡಿಯಲಾಗಿದೆ. ನೈಸರ್ಗಿಕ ಅರಣ್ಯವನ್ನು ಇಲ್ಲಿ ಹಾಳು ಮಾಡಿರುವುದು ಸರಿಯಲ್ಲ’ ಎಂದವರು ಆಕ್ಷೇಪವ್ಯಕ್ತಪಡಿಸಿದ್ದಾರೆ. ಮರ ಕಡಿದ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿ ಅವರು ಹೇಳಿದ್ದಾರೆ.