ಕೆಡಿಸಿಸಿ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಚಾರದ ಪ್ರಮಾಣದಲ್ಲಿಯೇ ಅಪಪ್ರಚಾರವೂ ಜೋರಾಗಿದೆ. ಈ ಬ್ಯಾಂಕಿನ 105 ವರ್ಷಗಳ ಇತಿಹಾಸದಲ್ಲಿ ಒಬ್ಬ ಮಹಿಳೆ ಸಹ ನಿರ್ದೇಶಕರಾಗಿಲ್ಲ. ಹೀಗಾಗಿ ಮಹಿಳಾ ಪ್ರಾತಿನಿಧ್ಯತೆಯನ್ನು ಪ್ರತಿಪಾದಿಸುವ ಉದ್ದೇಶದಿಂದ ಪ್ರಥಮ ಬಾರಿಗೆ ಸರಸ್ವತಿ ಎನ್ ರವಿ ಅವರು ಚುನಾವಣೆಗೆ ಸ್ಪರ್ಧಿಸಿದ್ದು, ಅಪಪ್ರಚಾರ ಅವರನ್ನು ಬಿಟ್ಟಿಲ್ಲ!
Advertisement. Scroll to continue reading.
`ಯಾವುದೇ ವ್ಯಕ್ತಿ ಅಥವಾ ಬಣದ ಪ್ರತಿನಿಧಿಯಾಗಿ ನಾನು ಚುನಾವಣೆಗೆ ಸ್ಪರ್ಧಿಸಿಲ್ಲ. ನಾನು ನಾಮಪತ್ರ ಹಿಂಪಡೆಯುತ್ತೇನೆ ಎಂಬ ಅಪಪ್ರಚಾರದಲ್ಲಿಯೂ ಹುರುಳಿಲ್ಲ’ ಎಂದು ಬಾರಿಗೆ ಸರಸ್ವತಿ ಎನ್ ರವಿ ಅವರು ಶಿರಸಿಯಲ್ಲಿ ಸುದ್ದಿಗಾರರ ಬಳಿ ಹೇಳಿಕೊಂಡರು. `ಅನಾವಶ್ಯಕ ಅಪಪ್ರಚಾರ ಮಾಡುತ್ತಿರುವುದು ನನ್ನ ಸ್ಫರ್ಧೆಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ನಾನು ಮಹಿಳಾ ಪ್ರಾತಿನಿಧ್ಯ, ಎಲ್ಲಾ ಸಹಕಾರಿ ಸಂಘಗಳಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ಸಾಮಾಜಿಕ ನ್ಯಾಯಕ್ಕಾಗಿ ಚುನಾವಣೆಗೆ ಸ್ಫರ್ಧಿಸಿದ್ದೇನೆ. ಇದನ್ನು ಹೊರತುಪಡಿಸಿ ಯಾರ ಒತ್ತಡ ಅಥವಾ ಆಮೀಷಕ್ಕೆ ಬಲಿಯಾಗಿಲ್ಲ’ ಎಂದವರು ಸ್ಪಷ್ಟಪಡಿಸಿದರು.
`ಸ್ಕೊಡ್‌ವೆಸ್ ಮಹಿಳಾ ಸೌಹಾರ್ದ ಸಹಕಾರಿಯ ಅಧ್ಯಕ್ಷೆಯಾಗಿ, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕಿಯಾಗಿ, ಉತ್ತರ ಕನ್ನಡ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಸಂಸ್ಥಾಪಕ ನಿರ್ದೇಶಕಿಯಾಗಿ, ಶಿರಸಿಯ ರೋಟರಿ ಸಂಸ್ಥೆಯ ಪ್ರಥಮ ಮಹಿಳಾ ಕಾರ್ಯದರ್ಶಿಯಾಗಿ, ಸ್ಕೊಡ್‌ವೆಸ್ ಸಂಸ್ಥೆಯ ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿಯಾಗಿ, ಶಾಲ್ಮಲಾ ಅಗ್ರೋ ಫೇರ್ ಎಂಡ್ ಇಲೈಟ್ ಸರ್ವಿಸಸ್ ಪ್ರೆöÊವೇಟ್ ಲಿ ಕಂಪನಿಯ ನಿರ್ದೇಶಕಿಯಾಗಿ ಕೆಲಸ ಮಾಡಿದ್ದೇನೆ. ಹಲವಾರು ರಾಜ್ಯ ಮತ್ತು ರಾಷ್ಟಮಟ್ಟದ ಸಂಸ್ಥೆಗಳ ಸದಸ್ಯಳಾಗಿ ಕಾರ್ಯನಿರ್ವಹಿಸಿದ ಅನುಭವದ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸುತ್ತಿದ್ದೇನೆ. ನನಗೆ ಯಾವುದೇ ಬಣದ ಸಹಕಾರವಿಲ್ಲದಿದ್ದರೂ ಅದರ ಭಯವಿಲ್ಲ. ಯಾವುದೇ ಬಣದ ವಿರುದ್ಧದ ಸ್ಫರ್ಧೆಯೂ ನನ್ನದಲ್ಲ’ ಎಂದವರು ಹೇಳಿದರು. `ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆಯಾಗಬೇಕು’ ಎಂಬ ಆಶಯವ್ಯಕ್ತಪಡಿಸಿದರು.
`ಜಿಲ್ಲೆಯ ಸಹಕಾರಿಗಳಿಗೆ ರಾಜ್ಯದಲ್ಲಿಯೇ ವಿಶೇಷ ಗೌರವವಿದೆ. ಯಾವುದೇ ಸಂದರ್ಭದಲ್ಲೂ ಆಸೆ, ಆಮಿಷಗಳಿಗೆ ಮರುಳಾಗಿ ತಾವು ಪ್ರತಿನಿಧಿಸುವ ಸಂಸ್ಥೆಗಳಿಗೆ ದ್ರೋಹ ಬಗೆಯುವುದಿಲ್ಲ. ಸಹಕಾರಿ ಮತದಾರರು ಬುದ್ಧಿವಂತ ಸುಸಂಸ್ಕೃತರು. 105 ವರ್ಷಗಳಲ್ಲಿ ಪ್ರಥಮ ಬಾರಿಗೆ ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸುತ್ತಿರುವ ನನ್ನ ಅನುಭವ ಮತ್ತು ಸಾಮರ್ಥ್ಯವನ್ನು ನೋಡಿ ಮತದಾನ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ. ಚುನಾವಣೆಯಲ್ಲಿ ಯಾವುದೇ ಫಲಿತಾಂಶ ಬಂದರೂ ಅದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ. ದಯವಿಟ್ಟು ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನನ್ನ ಹೋರಾಟಕ್ಕೆ ಎಲ್ಲಾ ಸಹಕಾರಿಗಳು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು. ಪ್ರಮುಖರಾದ ಹೇಮಲತಾ ಚೌಗುಲೆ, ಗೀತಾ ಹಣಬರ್, ವೀಣಾ ಮೊಗೇರ, ಸರೋಜಾ ಗಂಗೊಳ್ಳಿ, ಸ್ವಾತಿ ಶೆಟ್ಟಿ, ಲಲಿತಾ ಹೆಗಡೆ, ಭಾಗೀರತಿ ನಾಯ್ಕ, ರೇಖಾ ನಾಯ್ಕ ಹಾಗೂ ಮಾನಸ ಹೆಗಡೆ ಅವರು ಸರಸ್ವತಿ ಎನ್ ರವಿ ಅವರಿಗೆ ಬೆಂಬಲವಾಗಿದ್ದರು.