ಶಿರಸಿ ಯಡಳ್ಳಿಯ ಜನಾರ್ಧನ ಆಚಾರ್ಯ ಅವರು ಯಲ್ಲಾಪುರ ಕೊಂಡೆಮನೆ ಬಳಿಯ ವಿವಾಹಿತ ಮಹಿಳೆಯೊಬ್ಬರನ್ನು ತಮ್ಮ ಪ್ರೇಮದ ಪಾಶಕ್ಕೆ ಬೀಳಿಸಿಕೊಂಡಿದ್ದಾರೆ. ಮದುವೆಯಾದ ಗಂಡನಿಗೆ ಬೆದರಿಕೆ ಒಡ್ಡಿದ ಆ ಮಹಿಳೆ ಜನಾರ್ಧನ ಆಚಾರ್ಯ ಅವರ ಜೊತೆ ಪರಾರಿಯಾಗಿದ್ದಾರೆ.
ಶಿರಸಿಯ ಯಡಳ್ಳಿಯಲ್ಲಿ ಜನಾರ್ಧನ ಆಚಾರ್ಯ ಅವರು ವಾಸವಾಗಿದ್ದಾರೆ. ಶಿರಸಿಯ ಬನವಾಸಿ ರಸ್ತೆಯ ದತ್ತಾತ್ರೇಯ ಲೇಔಟ್ ಬಳಿ ವಾಸವಾಗಿದ್ದ ನಿಕಿತಾ ಶಿರೂಡ್ಕರ್ (ಮಹಿಳೆ ಹೆಸರು ಬದಲಿಸಿದೆ) ಅವರನ್ನು ಜನಾರ್ಧನ ಆಚಾರ್ಯ ಅವರು ಪುಸಲಾಯಿಸಿದ್ದಾರೆ. ನಿಕಿತಾ ಶಿರೂಡ್ಕರ್ ಅವರು ಯಲ್ಲಾಪುರದ ಮಂಜುನಾಥ ನಗರದ ಕೊಂಡೆಮನೆಯ ದಿಗಂತ ಪಾಠಣಕರ್ (ಹೆಸರು ಬದಲಿಸಿದೆ) ಅವರನ್ನು ವಿವಾಹವಾಗಿದ್ದು, ವಿವಾಹದ ನಂತರವೂ ಜನಾರ್ಧನ ಆಚಾರ್ಯ ಅವರು ನಿಕಿತಾ ಶಿರೂಡ್ಕರ್ ಅವರ ಸ್ನೇಹ ಮುಂದುವರೆಸಿದ್ದಾರೆ. ಅದು ಪ್ರೀತಿ-ಪ್ರೇಮ ಪ್ರಕರಣವಾಗಿ ಬದಲಾಗಿದ್ದು, ಮದುವೆಯಾದ ಪತಿಯನ್ನು ದೂರ ಮಾಡಿ ತಮ್ಮೊಂದಿಗೆ ಬರುವಷ್ಟರ ಮಟ್ಟಿಗೆ ಜನಾರ್ಧನ ಆಚಾರ್ಯ ಅವರು ನಿಕಿತಾ ಶಿರೂಡ್ಕರ್ ಅವರನ್ನು ಮರಳು ಮಾಡಿದ್ದಾರೆ.
ಸೆಪ್ಟೆಂಬರ್ 18ರಂದು ನಿಕಿತಾ ಶಿರೂಡ್ಕರ್ ಹಾಗೂ ಅವರ ಪತಿ ದಿಗಂತ ಪಾಠಣಕರ್ ಅವರು ಕೊಂಡೆಮನೆ ಶಾಲೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಸಮೀಪದಲ್ಲಿ ಅವರ ಗದ್ದೆಯಿದ್ದು, ಅಲ್ಲಿಗೆ ಹೋಗುವಾಗ ಜನಾರ್ಧನ ಆಚಾರ್ಯ ಅವರು ಆ ದಂಪತಿಯನ್ನು ಅಡ್ಡ ಹಾಕಿದರು. ದಿಗಂತ ಪಾಠಣಕರ್ ಅವರ ಎದುರ ನಿಂತ ಜನಾರ್ಧನ ಆಚಾರ್ಯ ಅವರು `ನಿನ್ನ ಪತ್ನಿ ನನ್ನನ್ನು ಇಷ್ಟಪಡುತ್ತಿದ್ದು, ಆಕೆಯನ್ನು ಬಿಟ್ಟುಬಿಡು’ ಎಂದು ಹೇಳಿದರು. `ಆಕೆಗೆ ಡೈವರ್ಸ ಮಾಡದೇ ಇದ್ದರೆ ನಿನ್ನ ಕೊಲೆ ಮಾಡುವೆ’ ಎಂದು ಬೆದರಿಸಿದರು. `ಡೈವರ್ಸ ಕೊಡಲ್ಲ’ ಎಂದು ದಿಗಂತ ಪಾಠಣಕರ್ ಅವರು ಎದುರುತ್ತರ ನೀಡಿದರು. ಆಗ, ಅಲ್ಲಿದ್ದ ನಿಕಿತಾ ಶಿರೂಡ್ಕರ್ ಅವರು ಸಹ `ನಾನು ಜನಾರ್ಧನ ಅವರ ಜೊತೆ ಶಿರಸಿಗೆ ಹೋಗುವೆ’ ಎಂದರು. `ನೀ ಏನೂ ಬೇಕಾದರೂ ಮಾಡಿಕೋ. ನಮ್ಮ ತಂಟೆಗೆ ಬಂದರೆ ಜೀವ ತೆಗೆಸುವೆ’ ಎಂದು ಬೆದರಿಸಿ ನಿಕಿತಾ ಶಿರೂಡ್ಕರ್ ಅವರು ಪರಾರಿಯಾದರು.
ಈ ಎಲ್ಲಾ ವಿಷಯದ ಬಗ್ಗೆ ಸಂತ್ರಸ್ತರು ನ್ಯಾಯಾಲಯದ ಮೊರೆ ಹೋಗಿದ್ದು, ಪೊಲೀಸ್ ಕೇಸು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ಸತ್ಯಾಸತ್ಯತೆಯ ಕುರಿತು ವಿಚಾರಣೆ ನಡೆಸಿದ್ದಾರೆ.