ಹಾರವಾಡದ ಜನವಸತಿ ಪ್ರದೇಶದ ಬಳಿ ಮೀನು ಸಂಸ್ಕರಣಾ ಘಟಕ ನಿರ್ಮಾಣವಾಗುತ್ತಿದೆ. ಸರ್ಕಾರಕ್ಕೆ ಹಾಗೂ ಸ್ಥಳೀಯರಿಗೆ ತಪ್ಪು ಮಾಹಿತಿ ನೀಡಿ ಘಟಕ ನಿರ್ಮಾಣದ ಆರೋಪ ಕೇಳಿ ಬಂದಿದ್ದು, ಅದಕ್ಕೆ ವಿರೋಧವ್ಯಕ್ತವಾಗಿದೆ.
ಜಯ ಕರ್ನಾಟಕ ಜನಪರ ವೇದಿಕೆಯವರು ಈ ಬಗ್ಗೆ ಹೋರಾಟ ಶುರು ಮಾಡಿದ್ದಾರೆ. 20 ದಿನಗಳ ಒಳಗೆ ಯೋಜನೆ ಕೈಬಿಡದೇ ಇದ್ದರೆ ರಾಜ್ಯದ ಎಲ್ಲಡೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ. `ಹಾರವಾಡ ಗ್ರಾಮದ ಜನವಸತಿ ಪ್ರದೇಶದ ಸಮೀಪ ರಾಜ್ ಫಿಶರಿಸ್ ಸಂಸ್ಥೆಯ ವತಿಯಿಂದ ಬೃಹತ್ ಪ್ರಮಾಣದ ಮೀನು ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಘಟಕ ಕಾರ್ಯಾರಂಭ ಮಾಡಿದರೆ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ’ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.
`ಉದ್ದೇಶಿತ ಘಟಕ ನಿರ್ಮಾಣವಾಗುತ್ತಿರುವ ಪ್ರದೇಶ ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ಯೋಜನೆಗೆ ನೀಡಿರುವ ಅನುಮತಿಗಳ ಕಾನೂನುಬದ್ಧತೆಯನ್ನು ಪರಿಶೀಲಿಸುವ ಅಗತ್ಯವಿದೆ. ಹಾರವಾಡ ಗ್ರಾಮದ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲೇ ಈಗಾಗಲೇ ಬೃಹತ್ ಮೀನು ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ಘಟಕ ನಿರ್ಮಾಣವಾದರೆ ಪರಿಸರದ ಮೇಲಿನ ಒತ್ತಡ ಹೆಚ್ಚಲಿದೆ’ ಎಂದವರು ಹೇಳಿದ್ದಾರೆ.
`ಮೀನು ಸಂಸ್ಕರಣೆಯ ವೇಳೆ ಉಂಟಾಗುವ ತೀವ್ರ ದುರ್ವಾಸನೆ ಹಾಗೂ ತ್ಯಾಜ್ಯ ವಿಲೇವಾರಿಯಿಂದ ವಾಯು ಮತ್ತು ಜಲಮಾಲಿನ್ಯ ಉಂಟಾಗುವ ಆತಂಕವಿದೆ. ಇದರಿಂದ ಮಕ್ಕಳು, ಗರ್ಭಿಣಿಯರು ಸೇರಿದಂತೆ ಸ್ಥಳೀಯ ನಿವಾಸಿಗಳ ಆರೋಗ್ಯಕ್ಕೆ ಅಪಾಯ ಎದುರಾಗಬಹುದು. ಘಟಕ ನಿರ್ಮಾಣಕ್ಕಾಗಿ ಸುತ್ತಮುತ್ತಲಿನ ಹಸಿರು ಪರಿಸರವೂ ನಾಶವಾಗುವ ಸಾಧ್ಯತೆಯಿದೆ’ ಎಂದು ಕಳವಳವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮೀನು ಸಂಸ್ಕರಣಾ ಘಟಕಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲ ಹಾಗೂ ದುರ್ವಾಸನೆಗೆ ಸಂಬAಧಿಸಿದ ಘಟನೆಗಳಲ್ಲಿ ಜಿಲ್ಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಐವರು ಮೃತಪಟ್ಟಿರುವುದನ್ನು ಪ್ರಸ್ತಾಪಿಸಿರುವ ವೇದಿಕೆ, ಇಂತಹ ಅಪಾಯಕಾರಿ ಕೈಗಾರಿಕೆಗಳಿಗೆ ಜನವಸತಿ ಪ್ರದೇಶಗಳ ಸಮೀಪ ಅವಕಾಶ ನೀಡುವುದು ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗುತ್ತದೆ ಎಂದು ಆಕ್ಷೇಪಿಸಿದೆ. `ಈ ಹಿನ್ನೆಲೆಯಲ್ಲಿ ಘಟಕ ನಿರ್ಮಾಣಕ್ಕೆ ಸಂಬAಧಿಸಿದ ಅನುಮತಿ ಪತ್ರಗಳು ಹಾಗೂ ಸಲ್ಲಿಸಿರುವ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು. ನಿಯಮ ಉಲ್ಲಂಘನೆ ಕಂಡುಬAದಲ್ಲಿ ಸಂಬAಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕು’ ಎಂದು ಆಗ್ರಹಿಸಲಾಗಿದೆ.
ಜನರ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯಕಾರಿಯಾಗಿರುವ ಯೋಜನೆಯನ್ನು ಕೈಬಿಡುವ ಕುರಿತು 20 ದಿನಗಳೊಳಗಾಗಿ ರಾಜ್ಯ ಸರ್ಕಾರ ಅಧಿಕೃತ ಹೇಳಿಕೆ ನೀಡಬೇಕು. ಇಲ್ಲವಾದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ವತಿಯಿಂದ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹಂತ ಹಂತವಾಗಿ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ. ಅರ್ಗೇಕರ್, ಜಿಲ್ಲಾ ಉಪಾಧ್ಯಕ್ಷ ಸುನಿಲ್ ತಾಂಡೇಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುದೇಶ್ ನಾಯ್ಕ್, ಯುವ ಘಟಕದ ಕಾರ್ಯಾಧ್ಯಕ್ಷ ರಾಹುಲ್ ತಾಂಡೇಲ್, ತಾಲೂಕು ಅಧ್ಯಕ್ಷ ಮೋಹನ್ ಉಳ್ವೇಕರ್, ಸಂಘಟನೆಯ ಪ್ರಮುಖರಾದ ಭರತ್ ಖಾರ್ವಿ, ಜೀವನ್ ತಾಂಡೇಲ್, ಸಂತೋಷ್ ಪಡ್ತಿ ಹಾಗೂ ನವೀನ್ ಹರಿಕಂತ್ರ ಉಪಸ್ಥಿತರಿದ್ದರು.