ಆರು ವರ್ಷದ ಹಿಂದೆ ಆನಂದ ಎಂದು ಹೆಸರು ಬದಲಿಸಿಕೊಂಡುಬoದಿದ್ದ ಹಸನ್ ಸಾಬ್’ಗೆ ಮೂಲೆಗುಂಡ್ಕಲಿನ ರಾಮಚಂದ್ರ ಭಟ್ಟ ಅವರು ಆಶ್ರಯ ನೀಡಿದ್ದು, ಊಟ ಹಾಕಿ ಕೆಲಸ ಕೊಟ್ಟ ಮನೆಯಲ್ಲಿಯೇ ಹಸನ್ ಸಾಬ್ ಅವರು ದರೋಡೆ ಮಾಡಿದ್ದಾರೆ. ಒಂದೇ ಒಂದು ಸುಳಿವು ಸಹ ಬಿಡದೇ ಪರಾರಿಯಾಗಿದ್ದ ನಾಲ್ವರು ಡಕಾಯಿತರನ್ನು ಯಲ್ಲಾಪುರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಹಿಡಿದಿದ್ದಾರೆ.
ಯಲ್ಲಾಪುರದ ಹುಟಕಮನೆಯ ಮೂಲೆಗುಂಡ್ಕಲಿನಲ್ಲಿ ರಾಮಚಂದ್ರ ಭಟ್ಟ ಅವರು ವಾಸವಾಗಿದ್ದಾರೆ. ಕೃಷಿಕರಾಗಿರುವ ಅವರು ತಮ್ಮ ತೋಟದ ಕೆಲಸಕ್ಕಾಗಿ ಬೇರೆ ಬೇರೆ ಕಾರ್ಮಿಕರನ್ನು ನಿಯೋಜಿಸುತ್ತಾರೆ. ಹೀಗಿರುವಾಗ ಆರು ವರ್ಷದ ಹಿಂದೆ ಧಾರವಾಡದ ಹಸನ್ ಸಾಬ್ ಅವರು ಮೂಲೆಗುಂಡ್ಕಲ್’ಗೆ ಬಂದಿದ್ದರು. ಹಸನ್ ಸಾಬ್ ಅವರ ಜೊತೆ ಅವರ ಪತ್ನಿಯೂ ಇದ್ದು, ಅವರು ತಮ್ಮನ್ನು ಆನಂದ-ಸoಗೀತಾ ಎಂದು ಪರಿಚಯಿಸಿಕೊಂಡಿದ್ದರು. ಕೆಲಸ ಅರೆಸಿ ಬಂದಿದ್ದ ಅವರಿಬ್ಬರಿಗೂ ರಾಮಚಂದ್ರ ಭಟ್ಟ ಅವರು ಉದ್ಯೋಗ ನೀಡಿ, ಕೈ ತುಂಬ ಕೆಲಸ ನೀಡಿದ್ದರು. ರಾಮಚಂದ್ರ ಭಟ್ಟ ಅವರ ಕುಟುಂಬದವರು ಸಹ ಅವರಿಗೆ ಹೊಟ್ಟೆತುಂಬ ಊಟ ನೀಡಿ ಅವರ ಮನೆಯಲ್ಲಿಯೇ ಆಶ್ರಯ ಕಲ್ಪಿಸಿದ್ದರು. ಆ ದಂಪತಿ ಆರು ತಿಂಗಳ ಕಾಲ ಅಲ್ಲಿಯೇ ದುಡಿದಿದ್ದರು.
ಹಸನ್ ಸಾಬ್ ಅವರು ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಆ ಬಗ್ಗೆ ರಾಮಚಂದ್ರ ಭಟ್ಟ ಅವರಿಗೆ ಅರಿವಿರಲಿಲ್ಲ. ಇಲ್ಲಿ ಇದ್ದಷ್ಟು ದಿನ ಪ್ರಾಮಾಣಿಕರಂತೆ ಹಸನ್ ಸಾಬ್ ಅವರು ತಮ್ಮ ಪತ್ನಿ ಜೊತೆ ದುಡಿದಿದ್ದರು. ಇಲ್ಲಿ ಕೆಲಸ ಬಿಟ್ಟು ಹೋದ ಬಳಿಕವೂ ಒಂದೆರಡು ಬಾರಿ ಮತ್ತೆ ಬಂದಿದ್ದರು. ಜನವರಿ-ಫೆಬ್ರವರಿ ಅವಧಿಯಲ್ಲಿ ಮತ್ತೆ ಮೂಲೆಗುಂಡ್ಕಲ್’ಗೆ ಬಂದಿದ್ದ ಹಸನ್ ಸಾಬ್ ಅವರು `ಅಡಿಕೆ ಹಾಳೆಯಿಂದ ಪ್ಲೇಟ್ ತಯಾರಿಸುವ ಪಾಕ್ಟರಿ ಮಾಡಿದ್ದೇನೆ. ಅಡಿಕೆ ಹಾಳೆಗಳಿದ್ದರೆ ನನಗೆ ಕೊಡಿ’ ಎಂದು ಕೇಳಿದ್ದರು. ಊರಿನ ಇನ್ನಿತರ ಮನೆಗಳಿಗೂ ಅವರು ಅಲೆದಾಡಿ ಅಡಿಕೆ ಹಾಳೆ ಖರೀದಿ ಮಾಡುವ ಬಗ್ಗೆ ಮಾತನಾಡಿದ್ದರು. ಅದಾದ ನಂತರವೂ ಮತ್ತೆ ಆಗಮಿಸಿ, ಒಂಟಿ ಮನೆ ಹಾಗೂ ದರೋಡೆಯ ರೂಪರೇಷೆಗಳನ್ನು ರಚಿಸಿಕೊಂಡು ಹೋಗಿದ್ದರು.
ಮಿಲ್ಟ್ರಿಮ್ಯಾನ್ ಸಹಾಯ!
ತಾನೂ ಕೆಲಸ ಮಾಡಿದ ಮನೆಯಲ್ಲಿಯೇ ದರೋಡೆ ಮಾಡಲು ಯೋಚಿಸಿದ ಹಸನ್ ಸಾಬ್ ಅವರು ಇದಕ್ಕಾಗಿ ಸೈನಿಕರೊಬ್ಬರ ಸಹಾಯಪಡೆದರು. ಉತ್ತಮ ಉದ್ಯೋಗದಲ್ಲಿದ್ದರೂ ಸಾಕಷ್ಟು ಸಾಲ ಮಾಡಿಕೊಂಡಿದ್ದ ಮುಬಾರಕ್ ಎಂಬಾತರನ್ನು ದರೋಡೆಗೆ ಬಳಸಿಕೊಂಡರು. ಸೇನೆಯಲ್ಲಿ ಕೆಲಸ ಮಾಡುವ ಮುಬಾರಕ್ ಅವರು 10 ದಿನಗಳ ಕಾಲ ರಜೆಗಾಗಿ ಊರಿಗೆ ಬಂದಿದ್ದು, ಅವರ ಸಾಲ ತೀರಿಸುವಷ್ಟು ಹಣ ಕೊಡುವುದಾಗಿ ನಂಬಿಸಿ ದರೋಡೆಗೆ ಕರೆ ತಂದಿದ್ದರು. ಮುಬಾರಕ್ ಅವರು ಚಾಕು ಹಿಡಿದು ಮನೆಯವರನ್ನು ಬೆದರಿಸಿದಾಗ ಹಸನ್ ಸಾಬ್ ಅವರು ಮತ್ತೊಬ್ಬರ ಜೊತೆ ಸೇರಿ ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ಮಾಡಿದ್ದರು. ಒಟ್ಟು ನಾಲ್ಕು ಜನ ಡಕಾಯಿತರು ದರೋಡೆಗೆ ಬಂದಿದ್ದು, ಅದರಲ್ಲಿ ಒಬ್ಬರು ಬೈಕ್ ಚಾಲಕರಾಗಿ ಹಾಗೂ ಮತ್ತೊಬ್ಬರು ಕಾರು ಚಾಲಕರಾಗಿ ಕೆಲಸ ಮಾಡಿದ್ದರು. ಈ ಎಲ್ಲಾ ಡಕಾಯಿತರು ಕಾರನ್ನು ಯಲ್ಲಾಪುರದಿಂದ ಅನತಿ ದೂರದಲ್ಲಿಯೇ ನಿಲ್ಲಿಸಿದ್ದರು. ಒಬ್ಬ ಡಕಾಯಿತ ಕಾರಿನಲ್ಲಿಯೇ ಕುಳಿತಿದ್ದು, ಮತ್ತೆ ಮೂವರು ಒಂದೇ ಬೈಕಿನಲ್ಲಿ ಮೂಲೆಗುಂಡ್ಕಲ್’ಗೆ ಬಂದಿದ್ದರು. ಮನೆಯವರಿಗೆ ಚಾಕು ತೋರಿಸಿ ದರೋಡೆ ಮಾಡಿದ ನಂತರ ಆ ಮನೆಯಲ್ಲಿದ್ದ ಬೈಕನ್ನು ಓಡಿಸಿಕೊಂಡು ಬಂದು ನಿಸರ್ಗಮನೆ ತಿರುವಿನಲ್ಲಿ ಬಿಟ್ಟಿದ್ದರು. ನಂತರ ಆನಗೋಡು ಮಾರ್ಗವಾಗಿ ಸಂಚರಿಸಿ ಅವರು ಕಾರು ಹತ್ತಿ ಪರಾರಿಯಾಗಿದ್ದರು.
ಈ ದರೋಡೆ ಪ್ರಕರಣ ಪೊಲೀಸರಿಗೆ ಅತ್ಯಂತ ಸವಾಲಾಗಿತ್ತು. ಎಲ್ಲಿ ಹುಡುಕಿದರೂ ಒಂದೇ ಒಂದು ಸಣ್ಣ ಸುಳಿವು ಸಹ ಸಿಗುತ್ತಿರಲಿಲ್ಲ. ಗುಡುಗು-ಸಿಡಿಲಿನ ಕಾರಣ ಅನೇಕ ಸಿಸಿ ಕ್ಯಾಮರಾಗಳು ಹಾಳಾಗಿದ್ದು, ರಸ್ತೆ ಅಂಚಿನಲ್ಲಿಯೂ ಕ್ಯಾಮರಾಗಳು ಇರಲಿಲ್ಲ. ಅದಾಗಿಯೂ, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರು. ಸಣ್ಣ ಸುಳಿವು ಆಧರಿಸಿ ಹುಡುಕಾಟ ನಡೆಸಿದಾಗ ಆನಂದ ಎಂದು ಹೆಸರು ಬದಲಿಸಿಕೊಂಡು ಕೆಲಸಕ್ಕೆ ಬಂದಿದ್ದ ಹಸನ್ ಸಾಬ್ ಅವರ ಫೋಟೋ ಸಿಕ್ಕಿತು. ಆ ಫೋಟೋವನ್ನು ಸಂತ್ರಸ್ತ ಕುಟುಂಬದವರು ಗುರುತಿಸಿದ್ದು, ಅದೇ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಗುಜರಾತ್’ಗೆ ಹೋಗಲು ಸಿದ್ಧವಾಗಿದ್ದ ಮಿಲ್ಟ್ರಿಯ ಮುಬಾರಕ್ ಜೊತೆ ಉಳಿದ ಮೂವರನ್ನು ಪೊಲೀಸರು ಬಂಧಿಸಿದರು. ದರೋಡೆಕೋರರು ಸಂಚು ರೂಪಿಸಿದ್ದು ಹೇಗೆ? ಇದರಲ್ಲಿ ಭಾಗಿಯಾದ ಮತ್ತಿಬ್ಬರ ಹೆಸರೇನು? ಆರೋಪಿತರ ಊರು ಯಾವುದು? ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರು ಯಾರಾರು? ಎನ್ನುವುದರ ಬಗ್ಗೆ ಮಾಹಿತಿ ಬರಬೇಕಿದ್ದು, ಶೀಘ್ರದಲ್ಲಿಯೇ ಆ ಕುರಿತು ಇನ್ನೊಂದು ವರದಿ ಪ್ರಸಾರವಾಗಲಿದೆ.