ಕಾರವಾರ ನಗರಸಭೆಯ ಅರುಣ್ ಹರಿಜನ್ ಹಾಗೂ ಮದನ್ ನಾಯ್ಕ ಅವರು ಮನೆ ಮನೆಗೆ ಹೋಗಿ ಕಸ ಸಂಗ್ರಹ ಮಾಡುತ್ತಿದ್ದು, ಅವರಿಗೆ ಆ ಕಸದಲ್ಲಿ ಚಿನ್ನ ಸಿಕ್ಕಿದೆ. ಕಳಸವಾಡದ ಕವಿತಾ ನಾಯ್ಕ ಅವರು ಕಳೆದುಕೊಂಡಿದ್ದ ಚಿನ್ನವನ್ನು ಅವರು ಮರಳಿಸಿದ್ದಾರೆ.
ಕಾರವಾರ ನಗರಸಭೆಯಿಂದ ಮನೆ ಮನೆಗೆ ಭೇಟಿ ನೀಡಿ ಕಸ ಸಂಗ್ರಹ ಮಾಡಲಾಗುತ್ತದೆ. ಹಸಿ ಕಸ ಹಾಗೂ ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ದೀಪಾವಳಿ ಹಬ್ಬದ ಪೂಜೆ ಮುಗಿದ ನಂತರ ಅರುಣ್ ವಿಠಲ್ ಹರಿಜನ್ ಹಾಗೂ ಮದನ್ ನಾಯ್ಕ ಅವರು ಕಳಸವಾಡಕ್ಕೆ ಹೋಗಿ ಕಸ ಸಂಗ್ರಹ ಮಾಡಿದ್ದಾರೆ. ಈ ವೇಳೆ ಆ ಭಾಗದ ಕವಿತಾ ಗಣೇಶ ನಾಯ್ಕ ಅವರು ಕಸದ ಜೊತೆ ಕವರ್ ಒಂದನ್ನು ಕಸದ ಗಾಡಿಗೆ ಸುರಿದಿದ್ದಾರೆ. ಆ ನಂತರ ಕವರ್ ಒಳಗೆ ಚಿನ್ನದ ಕಿವಿಯೋಲೆಯಿಟ್ಟಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ. ಅರಿವಿಲ್ಲದೇ ಆದ ಪ್ರಮಾದಕ್ಕೆ ಅವರು ನಂತರ ಪಶ್ಚಾತಾಪಪಟ್ಟಿದ್ದು, ಕಳೆದುಕೊಂಡ ಚಿನ್ನಗಾಗಿ ಎಲ್ಲಡೆ ಶೋಧ ನಡೆಸಿದ್ದಾರೆ.
ಈ ಕಸವನ್ನು ವಾಹನದಲ್ಲಿ ತುಂಬಿಕೊoಡು ಹೋಗಿದ್ದ ಸಿಬ್ಬಂದಿ ವಿಲೇವಾರಿ ಘಟಕದ ನೆಲಭರ್ತಿ ಜಾಗದಲ್ಲಿ ಕಸವನ್ನು ಬೇರ್ಪಡಿಸಿದ್ದಾರೆ. ಆಗ, ಅವರಿಗೆ ಕವರಿನಲ್ಲಿ ಚಿನ್ನದ ಓಲೆ ಸಿಕ್ಕಿದ್ದು ಅದನ್ನು ಜೋಪಾನ ಮಾಡಿದ್ದಾರೆ. ನಂತರ ಆ ಕಿವಿಯೋಲೆ ಯಾರದ್ದು? ಎಂದು ಅವರು ವಿಚಾರಿಸಿದ್ದಾರೆ. ಬಳಿಕ ಓಲೆ ಕಳೆದುಕೊಂಡು ಕಂಗಾಲಾಗಿದ್ದ ಕವಿತಾ ನಾಯ್ಕ ಅವರ ಬಗ್ಗೆ ಮಾಹಿತಿ ಪಡೆದು ಅವರ ಮನೆಗೆ ಹೋಗಿ ಅದನ್ನು ಮರಳಿಸಿದ್ದಾರೆ.
ಕಳೆದು ಹೋದ ಚಿನ್ನ ಮರಳಿ ಸಿಕ್ಕಿದಕ್ಕಾಗಿ ಕವಿತಾ ನಾಯ್ಕ ಅವರು ಖುಷಿಯಾಗಿದ್ದಾರೆ. ನಗರಸಭೆ ಸಿಬ್ಬಂದಿಯ ಪ್ರಾಮಾಣಿಕತೆಗೆ ಮೇಲಧಿಕಾರಿಗಳು ಮೆಚ್ಚುಗೆವ್ಯಕ್ತಪಡಿಸಿದ್ದಾರೆ.