ಮೂಲೆಗೂಂಡ್ಕಲ್’ನ ದರೋಡೆ ಪ್ರಕರಣದಲ್ಲಿ ಸ್ಥಳೀಯ ಕೆಲಸಗಾರರ ಮೇಲೆ ಪೊಲೀಸರು ಅನುಮಾನಪಟ್ಟಿದ್ದು, ನಂತರ ಅವರ ಸಹಾಯದಿಂದಲೇ ನಿಜವಾದ ದರೋಡೆಕೋರರನ್ನು ಹಿಡಿದಿದ್ದಾರೆ. ಆರೋಪಿಗಳ ಪತ್ತೆಗೆ ಸಹಕರಿಸಿದ ಸಿದ್ದಿ ಹುಡುಗರಿಗೆ ಪೊಲೀಸರು ಹೂವು ನೀಡಿ ಗೌರವಿಸಿದ್ದಾರೆ.
ADVERTISEMENT
ಯಲ್ಲಾಪುರದ ಮೂಲೆಗೂಂಡ್ಕಲ್’ನ ರಾಮಚಂದ್ರ ಭಟ್ಟ ಅವರ ಮನೆಯಲ್ಲಿ ನವೆಂಬರ್ 5ರ ರಾತ್ರಿ ದರೋಡೆ ನಡೆದಿತ್ತು. ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕು ತೋರಿಸಿ ಮನೆಯವರನ್ನು ಬೆದರಿಸಿದ್ದರು. ಅದಾದ ನಂತರ ಅಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ರಾಮಚಂದ್ರ ಭಟ್ಟ ಅವರ ಮನೆಯ ಬಗ್ಗೆ ಸಂಪೂರ್ಣ ಮಾಹಿತಿ ಇದ್ದವರೆ ಈ ಕೃತ್ಯ ಎಸಗಿರುವ ಸಾಧ್ಯತೆಯಿದ್ದು, ಪೊಲೀಸರು ಸಹಜವಾಗಿ ಸ್ಥಳೀಯರ ಮೇಲೆ ಅನುಮಾನವ್ಯಕ್ತಪಡಿಸಿದ್ದರು. ಈ ಹಿನ್ನಲೆ ಅಲ್ಲಿ ಕೆಲಸಕ್ಕೆ ಬರುವ ಮಂಜುನಾಥ ಸಿದ್ದಿ, ಪ್ರದೀಪ ಸಿದ್ದಿ, ಹರೀಶ ಸಿದ್ದಿ, ವಿನಾಯಕ ಸಿದ್ದಿ ಅವರ ಜೊತೆ ಗೋಕರ್ಣ ಬಂಕಿಕೊಡ್ಲದ ಗೋಪಾಲ ಗೌಡ ಅವರು ಪೊಲೀಸ್ ವಿಚಾರಣೆಗೆ ಒಳಪಡಿಸಿದ್ದರು.
ADVERTISEMENT
ಈ ಎಲ್ಲರನ್ನು ಪೊಲೀಸರು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಅವರ ಬಗ್ಗೆ ತಪ್ಪು ಅಭಿಪ್ರಾಯ ಬರುವ ಹಾಗಾಗಿತ್ತು. ಆದರೆ, ವಿನಾಯಕ ಸಿದ್ದಿ ಹಾಗೂ ಹರೀಶ ಸಿದ್ದಿ ಅವರು ವಿಚಾರಣೆ ವೇಳೆ ಪೊಲೀಸರಿಗೆ ಸ್ಪಷ್ಟ ಮಾಹಿತಿಯೊಂದನ್ನು ನೀಡಿದ್ದು ಅದು ಇಡೀ ತನಿಖೆಯ ದಿಕ್ಕು ಬದಲಿಸಿತು. `ರಾತ್ರಿ 9ಗಂಟೆ ಆಸುಪಾಸಿನಲ್ಲಿ ನಾವು ಯಲ್ಲಾಪುರದಿಂದ ಮರಳುವಾಗ ರಬ್ದಮನೆ ಘಟ್ಟದಲ್ಲಿ ಫೋನ್ ಮಾಡಲು ನಿಂತಿದ್ದೇವು. ಆಗ, ಒಂದು ಬೈಕು ವೇಗವಾಗಿ ಚಲಿಸಿತು’ ಎಂದು ಅವರು ಮಾಹಿತಿ ನೀಡಿದ್ದು, ಆ ಮಾಹಿತಿ ಆಧರಿಸಿ ಪೊಲೀಸರು ಇನ್ನೊಂದು ಆಯಾಮದಲ್ಲಿ ತನಿಖೆ ಶುರು ಮಾಡಿದರು. ವಿನಾಯಕ ಸಿದ್ದಿ ಹಾಗೂ ಹರೀಶ ಸಿದ್ದಿ ಅವರು ಹೇಳಿದ ಸಮಯದ ಆಧಾರದಲ್ಲಿ ಶೋಧ ನಡೆಸಿದಾಗ ಇನ್ನಷ್ಟು ಸಾಕ್ಷಿ ಸಿಕ್ಕಿದ್ದು, ಅದೇ ಆಧಾರದಲ್ಲಿ ಡಕಾಯಿತರು ನಾಲ್ಕು ದಿನಗಳ ಒಳಗೆ ಸಿಕ್ಕಿಬಿದ್ದರು.
ದರೋಡೆಕೋರರು ಸಿಕ್ಕಿಬಿದ್ದ ಹಿನ್ನಲೆ ತಟಗಾರದ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ರಾಮಚಂದ್ರ ಭಟ್ಟ ಹಾಗೂ ಎಸ್ ಎಂ ಭಟ್ಟ ಕುಟುಂಬದವರು `ಪೊಲೀಸರಿಗೆ ಅಭಿನಂದನೆ ಹಾಗೂ ಜಾಗೃತಿ ಕಾರ್ಯಾಗಾರ’ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಪೊಲೀಸರು ಸಿದ್ದಿ ಹುಡುಗರ ಕಾರ್ಯವನ್ನು ಪ್ರಶಂಶಿಸಿದರು. `ಕೇವಲ ಮಾಹಿತಿ ಸಂಗ್ರಹಣೆಗೆ ಮಾತ್ರ ಅವರನ್ನು ಕರೆದೊಯ್ದಿದ್ದು, ಈ ಪ್ರಕರಣದಲ್ಲಿ ಅವರು ಯಾವುದೇ ತಪ್ಪು ಮಾಡಿಲ್ಲ’ ಎಂದು ಎಲ್ಲರ ಮುಂದೆ ಪಿಸೈ ರಾಜಶೇಖರ ವಂದಲಿ ಹಾಗೂ ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಅವರು ಸ್ಪಷ್ಠಪಡಿಸಿದರು.
`ಅಪರಾಧ ಪ್ರಕರಣಗಳ ತಡೆಯುವುಕೆಗಾಗಿ ಪ್ರತಿಯೊಬ್ಬರು ಮನೆ ಮನೆಗೆ ಸಿಸಿ ಕ್ಯಾಮರಾ ಹಾಕಿಸಬೇಕು. ಮನೆಯ ಜೊತೆ ಮುಖ್ಯ ರಸ್ತೆ ಕಾಣುವ ರೀತಿ ಸಿಸಿ ಕ್ಯಾಮರಾ ಅಳವಡಿಸಬೇಕು’ ಎಂದು ಪಿಐ ಸುರೇಶ ಕುಂಬಾರ್ ಅವರು ಜನಜಾಗೃತಿ ಮೂಡಿಸಿದರು. `ದರೋಡೆ ಪ್ರಕರಣ ಅಂತ್ಯoತ ಕ್ಲಿಷ್ಟಕರವಾಗಿದ್ದು, ರಾಮಚಂದ್ರ ಭಟ್ಟ ಅವರ ತಾಯಿ ಶಾರದಾ ಭಟ್ಟ ಅವರು ತೋರಿದ ಧೈರ್ಯ ಹಾಗೂ ಕುಟುಂಬದವರು ನೀಡಿದ ಮಾಹಿತಿ ಡಕಾಯಿತರನ್ನು ಹಿಡಿಯಲು ಸಹಾಯವಾಗಿದೆ. ಊಟ-ನಿದ್ರೆ ಇಲ್ಲದೇ ಪೊಲೀಸರು ಈ ಪ್ರಕರಣ ಬೇದಿಸಿದ್ದು, ಇಂಥ ಪ್ರಕರಣ ನಡೆಯದಂತೆ ತಡೆಯಲು ಊರಿನವರು ಸಾಕಷ್ಟು ಮುನ್ನಚ್ಚರಿಕೆವಹಿಸಬೇಕು’ ಎಂದು ಕೋರಿದರು. `ಹೊರಭಾಗದಿಂದ ಕೆಲಸಕ್ಕೆ ಬರುವವರ ಸಂಪೂರ್ಣ ಮಾಹಿತಿ ತೋಟದ ಮಾಲಕರಲ್ಲಿರಬೇಕು. ಯಾವುದೇ ಕೆಲಸಗಾರರ ಬಗ್ಗೆ ಅನುಮಾನಗಳಿದ್ದರೆ ಅವರ ಬಗ್ಗೆ ಬೀಟ್ ಪೋಲಿಸರಲ್ಲಿ ವಿಚಾರಿಸಬೇಕು. ಕೆಲಸಗಾರರ ಆಗು-ಹೋಗುಗಳ ಬಗ್ಗೆಯೂ ಗಮನಿಸುತ್ತಿರಬೇಕು’ ಎಂದು ಪಿಸೈ ರಾಜಶೇಖರ ವಂದಲಿ ಅವರು ಕಿವಿಮಾತು ಹೇಳಿದರು.
ದರೋಡೆಕೋರರನ್ನು ಹಿಡಿದ ಪೊಲೀಸರಿಗೆ ಸನ್ಮಾನ
`ಬೀಟ್ ಪೊಲೀಸ್ ವ್ಯವಸ್ಥೆ ಇನ್ನಷ್ಟು ಭದ್ರಗೊಳಿಸಬೇಕು’ ಎಂದು ಊರಿನವರು ಮನವಿ ಮಾಡಿದರು. `ಹಿರಿಯ ನಾಗರಿಕರಿರುವ ಮನೆಗೆ 15 ದಿನಗಳಿಗೆ ಒಮ್ಮೆ ಪೊಲೀಸರು ಭೇಟಿ ನೀಡುವ ಆಸರೆ ಎಂಬ ಯೋಜನೆಯಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಪೊಲೀಸರು ವಿವರಿಸಿದರು. ಅತ್ಯಂತ ಕ್ಲಿಷ್ಟಕರ ಪ್ರಕರಣವನ್ನು ಚಾಣಾಕ್ಷತನದಿಂದ ಬೇಧಿಸಿದ ಪಿಐ ಸುರೇಶ ಕುಂಬಾರ್, ಪಿಸೈ ರಾಜಶೇಖರ್ ವಂದಲಿ, ಪೊಲೀಸ್ ಸಿಬ್ಬಂದಿ ಮಹಮದ್ ಶಫೀ ಶೇಖ್, ಮಹಾವೀರ ಡಿ ಎಸ್, ವಿಶ್ವನಾಥ ಜಾಯನಗೌಡರ್, ರಾಜಪ್ಪ ದನಗರ್, ಮಾರುತಿ ಕೆ ಎಚ್, ಸುರೇಶ ಕಂಟ್ರಾಕ್ಟರ್, ಗಂಗಾಧರ ಚಲವಾದಿ, ಪರಮೇಶ್ವರ ಎಸ್ ಕೆ ಅವರನ್ನು ಊರಿನವರು ಸನ್ಮಾನಿಸಿದರು. ನರಸಿಂಹ ಭಟ್ಟ ಬೋಳಪಾಲ್, ಎಂ ಜಿ ಭಟ್ಟ ಶೀಗೇಪಾಲ್, ಆರ್ ಎಸ್ ಭಟ್ಟ ಶೀಗೇಪಾಲ್, ಪ್ರಶಾಂತ ಸಭಾಹಿತ, ರಾಮಕೃಷ್ಣ ಅಳ್ವೇಗದ್ದೆ, ಮಂಜುನಾಥ ಕೊಂಬೇಪಾಲ್ ಇತರರು ಕಾರ್ಯಕ್ರಮದಲ್ಲಿದ್ದರು.