ಶಿರಸಿ-ಕುಮಟಾ ಹೆದ್ದಾರಿ ಅಭಿವೃದ್ಧಿಗಾಗಿ ಆರು ವರ್ಷದ ಹಿಂದೆ ತೆರವು ಮಾಡಲಾಗಿದ್ದ ಬಸ್ ನಿಲ್ದಾಣಗಳನ್ನು ಮತ್ತೆ ನಿರ್ಮಾಣ ಮಾಡಿಲ್ಲ. ಹೀಗಾಗಿ ಈ ಮಾರ್ಗದ ಪ್ರಯಾಣಿಕರು ಬರುವ ಬಸ್ಸಿಗಾಗಿ ಬಿಸಿಲಿನಲ್ಲಿಯೇ ಕಾಯುತ್ತಿದ್ದಾರೆ.
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಅಲ್ಲಲ್ಲಿ ಬಹುತೇಕ ಕೆಲಸ ಮುಕ್ತಾಯಗೊಂಡಿದೆ. ಆದರೆ, ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸುವ ವೇಳೆ ರಸ್ತೆ ವಿಸ್ತರಣೆಗಾಗಿ ತೆರವು ಮಾಡಿದ್ದ ಬಸ್ ನಿಲ್ದಾಣಗಳು ಮಾತ್ರ ಅರೆಬರೆಯಾಗಿಯೇ ನಿಂತಿವೆ. ಹೊಸ ಬಸ್ ತಂಗುದಾಣಗಳ ನಿರ್ಮಾಣ ಕಾರ್ಯ ಮಾತ್ರ ಈ ಮಾರ್ಗದಲ್ಲಿ ಇನ್ನೂ ಆಗಿಲ್ಲ. ಸುಡು ಬಿಸಿಲಿನಲ್ಲಿ ನಿಲ್ಲುವ ಸ್ಥಿತಿ ಮಾತ್ರ ಇಲ್ಲಿಯ ಪ್ರಯಾಣಿಕರಿಗೆ ತಪ್ಪಿಲ್ಲ.
ಈ ರಸ್ತೆಯ ಸುಮಾರು 10ಕ್ಕೂ ಅಧಿಕ ಕಡೆ ತಂಗುದಾಣ ಒಡೆದುಹಾಕಿ ಆರು ವರ್ಷಗಳೇ ಕಳೆದಿವೆ. ಈ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 2018ರಲ್ಲಿ ಹಸಿರು ನಿಶಾನೆ ನೀಡಿತ್ತಾದರೂ ಅರಣ್ಯ ಇಲಾಖೆಯ ಅನುಮತಿ ದೊರೆತಿರಲಿಲ್ಲ. 2021ರ ವೇಳೆ ಕಾಮಗಾರಿ ಶುರುವಾಗಿದ್ದು, ಸದ್ಯ ಮುಕ್ತಾಯದ ಹಂತದಲ್ಲಿದೆ. ಅದುವರೆಗೂ ರಾಜ್ಯ ಹೆದ್ದಾರಿ ಆಗಿದ್ದ ಈ ಮಾರ್ಗ ಸುಮಾರು 5.5ರಿಂದ 7 ಮೀಟರ್ಗಳಷ್ಟು ಅಗಲ ಹೊಂದಿತ್ತು. ರಸ್ತೆಗೆ ತಾಗಿಯೇ ಅಂದಿನ ದಿನಗಳಲ್ಲಿ ಬಸ್ ತಂಗುದಾಣಗಳನ್ನೂ ನಿರ್ಮಿಸಲಾಗಿತ್ತು. ರಸ್ತೆ ವಿಸ್ತರಣೆಗೆ 12 ಮೀಟರ್ ಜಾಗ ಬಳಸಿಕೊಳ್ಳಲು ಗುತ್ತಿಗೆದಾರ ಕಂಪನಿ ಆರ್ಎನ್ಎಸ್’ಗೆ ಅನುಮತಿ ಸಿಕ್ಕಿದ್ದರಿಂದ ಮೊದಲ ಕಾರ್ಯವಾಗಿ ರಸ್ತೆಯ ಈ ವ್ಯಾಪ್ತಿಯಲ್ಲಿದ್ದ ಮರಗಳನ್ನು ತೆಗೆಲಾಗಿತ್ತು. ಇದೇ ವೇಳೆ ರಸ್ತೆ ಪಕ್ಕದಲ್ಲಿದ್ದ ಬಸ್ ಸ್ಟಾಪ್ಗಳನ್ನೂ ಕೆಲವೆಡೆ ಜೆಸಿಬಿ ಬಳಸಿ ತೆಗೆಯಲಾಗಿತ್ತು. ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹಾರೂಗಾರ್, ಗೋಳಿ ಕ್ರಾಸ್, ಮುಳಖಂಡ, ಚಿಕ್ಕಡಿ ಸೇರಿದಂತೆ ಸುಮಾರು 10ಕ್ಕೂ ಅಧಿಕ ಬಸ್ ತಂಗುದಾಣಗಳು ರಸ್ತೆ ವಿಸ್ತರಣೆಯ ವೇಳೆ ನೆಲ ಕಚ್ಚಿವೆ.
ಇಲ್ಲಿಯ ಗೋಳಿ ಕ್ರಾಸ್ ಬಳಿ ರಸ್ತೆಯನ್ನು ತಗ್ಗಿಸಿದ್ದರಿಂದ ಬಸ್ ಸ್ಟಾಪ್ ಎತ್ತರದಲ್ಲಿದ್ದು, ಯಾರಿಗೂ ಹತ್ತಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ಇಷ್ಟು ವರ್ಷಗಳ ಕಾಲ ಬಿಸಿಲಲ್ಲೇ ನಿಂತು ಬಸ್ ಕಾದು ಈ ವರ್ಷ ಅಡಕೆಯ ಸೋಗೆಯ ಛಾವಣಿ ಹಾಕಿ ಶ್ರಮದಾನದ ಮೂಲಕ ಅಡಕೆಯ ದಬ್ಬೆಯ ಕುಳಿತುಕೊಳ್ಳುವ ಮಂಚ ನಿರ್ಮಿಸಿಕೊಂಡಿದ್ದಾರೆ. ಹಾರೂಗಾರ್ ಬಸ್ ಸ್ಟಾಪ್ ಕಿತ್ತು ಹಾಕಿ ರಸ್ತೆ ವಿಸ್ತರಿಸಿದ ಮೇಲೆ ಇಲ್ಲಿ ನಿಂತುಕೊಳ್ಳಲೂ ಜಾಗವಿಲ್ಲದ ಸ್ಥಿತಿಯಿದೆ. ಕುಮಟಾ ತಾಲೂಕಿನ ಅನೇಕ ಕಡೆಯಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಮುಂದುವರೆದಿದೆ.