`ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಹಾಗೂ ಜೀವನೋಪಾಯಕ್ಕೆ ಲಕ್ಷಾಂತರ ಜನ ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿದ್ದು, 2005ರ ಮೊದಲು ಅತಿಕ್ರಮಣ ಮಾಡಿದವರ ರಕ್ಷಣೆಗಾಗಿ ಸರ್ಕಾರ ಮದ್ಯಪ್ರವೇಶ ಮಾಡಬೇಕು’ ಎಂದು ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿ ಆಗ್ರಹಿಸಿದೆ. ಈ ಕುರಿತು ಚಂದ್ರಕಾoತ ಕೊಚರೇಕರ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ.
ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಜಿ ಎಂ ಶೆಟ್ಟಿ ಅಚಿವೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ ಟಿ ನಾಯ್ಕ ಅವರ ನೇತೃತ್ವದ ನಿಯೋಗವು ಸಚಿವ ಲಕ್ಷ್ಮಣ ಸವದಿ ಅವರ ಜೊತೆ ಈ ಬಗ್ಗೆ ಚರ್ಚಿಸಿದೆ. `2005ರ ಪೂರ್ವದ ಅರಣ್ಯ ಭೂಮಿ ಸಾಗುವಳಿದಾರರ ಅತಿಕ್ರಮಣವನ್ನು ಸಕ್ರಮಪಡಿಸಲು ಇರುವ ಗೊಂದಲವನ್ನು ಬಗೆಹರಿಸಲು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕು. ಹೋರಾಟ ಪ್ರಮುಖರೊಂದಿಗೆ ಉನ್ನತಾಧಿಕಾರ ಮಟ್ಟದ ಸಂವಾದ ಸಭೆ ಇದಾಗಿರಬೇಕು’ ಎಂದು ಒತ್ತಾಯಿಸಲಾಗಿದೆ. `ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಲು ಜಿಲ್ಲಾ ಮಟ್ಟದಲ್ಲಿ ಇರುವ ತೊಡಕುಗಳನ್ನು ಬಗೆಹರಿಸಬೇಕು. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆಯ ಸರಳೀಕರಣಕ್ಕೆ ತಿದ್ದುಪಡಿ ಸೂಚಿಸಿರುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರದ ಅಂಗೀಕಾರ ಪಡೆಯಲು ಪರಷ್ಪರ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಬೇಕು’ ಎಂದು ಆಗ್ರಹಿಸಲಾಗಿದೆ.
`ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಭೂಮಿಯ ಅಧಿಭೋಗದ ಹಕ್ಕಿಗಾಗಿ ಹಲವು ದಶಕಗಳಿಂದ ಹೋರಾಟ ನಡೆಸುತ್ತ ಬಂದಿದ್ದರೂ ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿಲ್ಲ. ಶೇ 82ರಷ್ಟು ಅರಣ್ಯ ಭೂಮಿ ಹೊಂದಿರುವ ಜಿಲ್ಲೆಯಲ್ಲಿ ಅರ್ಹ ಅರಣ್ಯ ಭೂಮಿಸಾಗುವಳಿದಾರರಿಗೆ ಭೂಮಿಯ ಅಧಿಭೋಗದ ಹಕ್ಕು ನೀಡಿಲ್ಲ. ಅರಣ್ಯ ಹಕ್ಕು ಕ್ಲೇಮುದಾರರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ’ ಎಂದು ಸಮಿತಿಯವರು ಹೇಳಿದ್ದಾರೆ. ಈ ಕುರಿತು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ನಿಯೋಗದವರು ಭೇಟಿ ಆಗಿದ್ದಾರೆ. ಹೋರಾಟ ಸಮಿತಿಯ ರಮಾನಂದ ನಾಯ್ಕ ಅಚವೆ, ರಾಮದಾಸ ಎಚ್ ನಾಯಕ, ನಾಗಯ್ಯ ಸೇರುಗಾರ, ಶಂಕರ ಕೊಡಿಯಾ, ರಘುಪತಿ ಹೆಬ್ಬಾರ, ನಾರಾಯಣ ಮುಕ್ತಿ, ಮಹಾಬಲ ಶೇರುಗಾರ, ಮಹದೇವ ನಾಯ್ಕ, ಮಂಜುನಾಥ ಶಾಸ್ರಿ, ರಘು ಮರಾಠಿ ಇತರರು ಇದ್ದರು.