ಕಾರವಾರ ಬಸ್ ನಿಲ್ದಾಣದಲ್ಲಿನ ಶೌಚಾಲಯದಲ್ಲಿ ಅನಧಿಕೃತ ಶುಲ್ಕ ವಸೂಲಿ ನಡೆದಿದ್ದು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಚೌಧರಿ ಅವರು ಇದನ್ನು ಗಮನಿಸಿದ್ದಾರೆ. ಮೂತ್ರ ವಿಸರ್ಜನೆಗೆ ಬರುವ ಮಹಿಳೆಯರಿಂದಲೂ ಹಣಪಡೆಯುತ್ತಿರುವ ಬಗ್ಗೆ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.
`ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡಿದೆ. ಆದರೆ, ಶೌಚಾಲಯದಲ್ಲಿ ಮಹಿಳೆಯರಿಗೆ ಕಾನೂನುಬಾಹಿರವಾಗಿ ಶುಲ್ಕ ವಿಧಿಸಲಾಗುತ್ತಿದೆ’ ಎಂದವರು ಅಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಸುಮಾರು 23 ವರ್ಷಗಳಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸುತ್ತಿರುವ ಮಹಿಳೆಗೆ ಅತ್ಯಂತ ಕನಿಷ್ಠ ವೇತನ ನೀಡುತ್ತಿರುವ ಬಗ್ಗೆಯೂ ಈ ವೇಳೆ ಗಮನಕ್ಕೆ ಬಂದಿದ್ದು, ಆ ಬಗ್ಗೆಯೂ ಅವರು ವಿಚಾರಣೆ ನಡೆಸಿದ್ದಾರೆ.
`ಕಾರವಾರದ ಬಸ್ ನಿಲ್ದಾಣದಲ್ಲಿ ಮಹಿಳಾ ಸುರಕ್ಷತೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದವರು ತಾಕೀತು ಮಾಡಿದ್ದಾರೆ. `ಮಹಿಳಾ ಪ್ರಯಾಣಿಕರು ಸೇರಿದಂತೆ ಎಲ್ಲಾ ಸಾರ್ವಜನಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಸೂಚಿಸಿದ್ದಾರೆ. `ಬಸ್ ನಿಲ್ದಾಣದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಸಂಬAದಪಟ್ಟ ಸಹಾಯವಾಣಿ ಸಂಖ್ಯೆಗಳನ್ನು ಅತ್ಯಂತ ಸ್ಪಷ್ಠವಾಗಿ ಕಾಣುವಂತೆ ಬರೆಸಬೇಕು’ ಎಂದಿದ್ದಾರೆ. ಕಾರ್ಮಿಕ ಇಲಾಖೆಗಳ ನಿಯಮಗಳ ಪ್ರಕಾರ ಸ್ವಚ್ಚತಾ ಸಿಬ್ಬಂದಿಗೆ ವೇತನ ನೀಡುವಂತೆ ಸೂಚಿಸಿದ ಅವರು ಇದುವರೆಗೆ ಕನಿಷ್ಠ ವೇತನವನ್ನು ನೀಡದೇ, ಸಿಬ್ಬಂದಿಗಳ ಸೇವೆಗೆ ಟೆಂಡರ್ ಪಡೆದಿರುವ ಸಂಸ್ಥೆಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬ0ದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಸ್ ನಿಲ್ದಾಣದಲ್ಲಿನ ಶುದ್ದ ಕುಡಿಯುವ ನೀರಿನ ಘಟಕ ಹಾಳಾಗಿದ್ದರೂ ಇದುವರೆಗೆ ದುರಸ್ತಿಗೆ ಕ್ರಮ ಕೈಗೊಳ್ಳದ ಬಗ್ಗೆ ಸಂಬoದಪಟ್ಟವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, `ಬಸ್ ನಿಲ್ದಾಣದಲ್ಲಿನ ಸಿಸಿಟಿವಿ ಸಂಖ್ಯೆಗಳನ್ನು ಹೆಚ್ಚು ಮಾಡುವಂತೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಬ್ಯಾಕ್ ಅಪ್ ಅವಧಿಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದರು.
ಕ್ರಿಮ್ಸ್ ಆಸ್ಪತ್ರೆಗೆ ಭೇಟಿ : ನಂತರ ಕ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷರು, ಆಸ್ಪತ್ರೆಯಲ್ಲಿನ ಮಹಿಳೆ ಮತ್ತು ಮಕ್ಕಳ ಚಿಕಿತ್ಸೆ ಕುರಿತಂತೆ ಮಾಹಿತಿ ಪಡೆದರು. ಹೆರಿಗೆ ವಿಭಾಗದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಸ್ನಾನಕ್ಕೆ ಮತ್ತು ಕುಡಿಯಲು ಬಿಸಿ ನೀರಿನ ಕೊರತೆ ಇರುವುದನ್ನು ರೋಗಿಗಳಿಂದಲೇ ಮಾಹಿತಿ ಪಡೆದ ಅವರು ತಕ್ಷಣ ಅವರಿಗೆ ಬಿಸಿ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಕ್ರಿಮ್ಸ್ ನ ನಿರ್ದೇಶಕರಿಗೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಪಿಎಫ್ ಪಾವತಿ ಮಾಡದೇ ಇರುವ ಬಗ್ಗೆ ಸಿಬ್ಬಂದಿಗಳಿ0ದ ದೂರು ಆಲಿಸಿದ ಅಧ್ಯಕ್ಷರು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರು ಮತ್ತು ಕ್ರಿಮ್ಸ್ ಆಸ್ಪತ್ರೆಯಲ್ಲಿನ ರೋಗಿಗಳೊಂದಿಗೆ ಅಧ್ಯಕ್ಷರು ಸಂವಾದ ನಡೆಸಿ, ಕುಂದು ಕೊರತೆಗಳ ಕುರಿತಂತೆ ಮಾಹಿತಿ ಪಡೆದರು.
ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಕ್ರಿಮ್ಸ್ ನ ನಿರ್ದೇಶಕಿ ಡಾ.ಪೂರ್ಣಿಮಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಂಜಯ್ ದೊಡ್ಡಮನಿ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ, ತಹಸೀಲ್ದಾರ್ ನಿಶ್ಚಲ್ ನರೋನ್ಹ, ಕ್ರಿಮ್ಸ್ ನ ವಿವಿಧ ವಿಭಾಗಗಳ ಮುಖ್ಯಸ್ಥರು, ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.