ಶಿರಸಿ – ಹುಬ್ಬಳ್ಳಿ ರಸ್ತೆಯಂಚಿನ ನಾಲ್ಕು ಎಕರೆ ಭೂಮಿಯ ಮೇಲೆ ಮರಾಠಿಕೊಪ್ಪದ ಯಮೂನಾ ಗುಡಿಗಾರ್ ಅವರು ಕಣ್ಣು ಹಾಕಿದ್ದಾರೆ. ಅದೇ ಭಾಗದ ಪರಶುರಾಮ ಗುಡಿಗಾರ ಹಾಗೂ ಚಾಮರಾಜನಗರದಲ್ಲಿರುವ ಪುಷ್ಪಾ ಗುಡಿಗಾರ ಅವರ ಜೊತೆ ಸೇರಿ ಆ ಆಸ್ತಿ ಕಬಳಿಸುವ ಪ್ರಯತ್ನ ಮಾಡಿದ್ದಾರೆ.
ಶಿರಸಿ-ಹುಬ್ಬಳ್ಳಿ ರಸ್ತೆ ಅಂಚಿನ ವಿವೇಕಾನಂದ ನಗರ ವ್ಯಾಪ್ತಿಯಲ್ಲಿನ ಭೂಮಿಗೆ ಸದ್ಯ ಬಾರೀ ಬೇಡಿಕೆ ಬಂದಿದೆ. ಲಂಡಕನಳ್ಳಿ ಗ್ರಾಮದ ಸರ್ವೇ ನಂ 45*ಬ ಕ್ಷೇತ್ರ ಸದ್ಯ ವಿವಾದ ಎಬ್ಬಿಸಿದೆ. ಈ ಭೂಮಿಯನ್ನಯ ಶಾಂತಿನಗರ ಮದೀನಾ ಮಂಜಿಲ್ ಬಳಿಯ ಜಿನಿತ್ ರಫೀಕ್ ಬೇಸಾನಿಯ ಅವರು ಖರೀದಿಸಿದ್ದರೂ ಯಮೂನಾ ನಾಗೇಶ ಗುಡಿಗಾರ್, ಪರಶುರಾಮ ನಾಗೇಶ ಗುಡಿಗಾರ ಹಾಗೂ ಚಾಮರಾಜನಗರದಲ್ಲಿರುವ ಪುಷ್ಪಾ ಗಿರೀಶ ಗುಡಿಗಾರ ಅವರು ಸೇರಿ ಕಬಳಿಸುವ ಸಾಹಸ ಮಾಡಿದ್ದಾರೆ.
ಈ ಆಸ್ತಿಯನ್ನು ಮೊದಲು ಕರ್ನಾಟಕ ಗೃಹ ಮಂಡಳಿಯೂ ಯಮೂನಾ ನಾಗಪ್ಪ ಗುಡಿಗಾರ ಅವರಿಗೆ ಕರಾರು ಆಧಾರದಲ್ಲಿ ನೀಡಿತ್ತು. 2003ರಲ್ಲಿ ಅವರು ಅದನ್ನು ಸುಧಾಕರ ರಾಮದಾಸ ಗುಡಿಗಾರ ಅವರಿಗೆ ವಿಶೇಷ ಮೊಕ್ಷಾನಾಮೆ ನೀಡಿ ಕ್ರಯ ದಸ್ತು ಮಾಡುವ ಅಧಿಕಾರ ನೀಡಿದ್ದರು. ಅದರ ಪ್ರಕಾರ, ಸುಧಾಕರ ಗುಡಿಗಾರ ಅವರು ಆ ಭೂಮಿಯನ್ನು 2007ರಲ್ಲಿ ನಾಗರಾಜ ಗೋವಿಂದ ಶೆಟ್ಟಿ ಅವರಿಗೆ ಮಾರಾಟ ಮಾಡಿದ್ದರು. ನಂತರ ನಾಗರಾಜ ಶೆಟ್ಟಿ ಅವರು ಕರ್ರೀ ಕೃಷ್ಣ ರೆಡ್ಡಿ ಅವರಿಗೆ ಮಾರಾಟ ಮಾಡಿದ್ದರು. ಕರ್ರೀ ಕೃಷ್ಣ ರೆಡ್ಡಿ ಅವರು 2009ರಲ್ಲಿ ಶ್ರೀಕಾಂತ ಸುರೇಶ ತಾರಿಬಾಗಿಲ ಅವರಿಗೆ ಪವರ್ ಆಫ್ ಆಟರ್ನಿ ನೀಡಿದ್ದು, 2009ರಲ್ಲಿಯೇ ರಾಮಚಂದ್ರ ಹೆಗಡೆ ಅವರಿಗೆ ಆ ಭೂಮಿ ಮಾರಾಟವಾಗಿತ್ತು. ರಾಮಚಂದ್ರ ಹೆಗಡೆ ಅವರಿಂದ ಜೀನತ ರಫಿಕ್ ಬೇಸಾನಿಯ ಅವರು ಆ ಕ್ಷೇತ್ರವನ್ನು ಖರೀದಿ ಮಾಡಿದ್ದರು.
ಹೀಗಿರುವಾಗ, 2026ರ ಅಗಸ್ಟ 24ರಂದು ಜೀನತ ರಫಿಕ್ ಬೇಸಾನಿಯ ಅವರು ತಮ್ಮ ಭೂಮಿಯಲ್ಲಿ ಕೆಲಸಗಾರರನ್ನು ದುಡಿಸುತ್ತಿದ್ದರು. ಆಗ ಯಮೂನಾ ಗುಡಿಗಾರ್ ಹಾಗೂ ಪರಶುರಾಮ ಗುಡಿಗಾರ ಅವರು ಅಲ್ಲಿಗೆ ಆಗಮಿಸಿದ್ದು, ಅನಗತ್ಯ ಜಗಳ ಶುರು ಮಾಡಿದರು. `ಈ ಜಾಗ ನಮ್ಮದು’ ಎಂದು ಅವರಿಬ್ಬರು ವಾದ ಮಾಡಿದ್ದು, ಕೆಲಸಗಾರರನ್ನು ನಿಂದಿಸಿದರು. ನಂತರ ಭೂ ಮಾಲಕರ ವಿರುದ್ಧ ಸುಳ್ಳು ದೂರು ದಾಖಲಿಸಿದರು. ಆ ಆಸ್ತಿ ಕಬಳಿಸುವ ಹುನ್ನಾರದಿಂದ ಅವರಿಬ್ಬರು ಅಧಿಕಾರಿಗಳ ಜೊತೆ ಸೇರಿ ಕೆಲ ನಕಲಿ ದಾಖಲೆ ಸೃಷ್ಠಿಸಿದರು. ಪರಶುರಾಮ ಗುಡಿಗಾರ ಹಾಗೂ ಪುಷ್ಪಾ ಗುಡಿಗಾರ ಅವರ ಹೆಸರಿನಲ್ಲಿ ಅಕ್ರಮವಾಗಿ ನಮೂನೆ – 3ನ್ನುಪಡೆದಿದ್ದು, ಇದರಿಂದ ಭೂ ಮಾಲಕರಾದ ಜಿನಿತ್ ರಫೀಕ್ ಬೇಸಾನಿಯ ಅವರು ಆಘಾತಕ್ಕೊಳಗಾದರು.
ತಮಗಾದ ಅನ್ಯಾಯಯದ ವಿರುದ್ಧ ಜೀನತ ರಫಿಕ್ ಬೇಸಾನಿಯ ಅವರು ಕಾನೂನು ಹೋರಾಟ ಶುರು ಮಾಡಿದ್ದಾರೆ. ತಮ್ಮ ತಾಯಿ ಹೆಸರಿನಲ್ಲಿರುವ ಭೂಮಿ ಕಬಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶಾಂತಿನಗರದ ವ್ಯಾಪಾರಿ ರಿಜ್ವಾನ್ ರಫೀಕ್ ಬೇಸಾನಿಯಾ ಅವರು ಕೋರ್ಟು-ಕಚೇರಿ ಅಲೆದಾಟ ನಡೆಸಿದ್ದಾರೆ.