ಶಿರಸಿಯಲ್ಲಿ ಸ್ಟೇಶನರಿ ಅಂಗಡಿ ನಡೆಸುವ ಶ್ರವಣಕುಮಾರ ಹಾಗೂ ಬ್ಯಾಂಕ್ ಮ್ಯಾನೇಜರ್ ವಿವೇಕ್ ಪೆಡ್ನೆಕರ್ ಪರಸ್ಪರ ಹೊಡೆದಾಟ ನಡೆಸಿದ್ದಾರೆ. ಈ ಹೊಡೆದಾಟಕ್ಕೆ ಅಜಿತ್ ಸಿರ್ಸಿಕರ್ ಎಂಬಾತರು ಕೈ ಜೋಡಿಸಿದ್ದಾರೆ.
ಶಿರಸಿಯ ತಾಮೀರ್ ಕೋ ಆಪರೇಟಿವ್ ಬ್ಯಾಂಕ್ ಸಮೀಪ ವಾಸಿಸುವ ವಿವೇಕ್ ವಾಸುದೇವ ಪೆಡ್ನೇಕರ್ ಅವರು ರಾಜಧಾನಿ ಸೌಹಾರ್ಧದದಲ್ಲಿ ಮ್ಯಾನೇಜರ್ ಆಗಿದ್ದಾರೆ. ಅವರ ಮನೆ ಮುಂದೆ ಎರಡು ಅಂಗಡಿಗಳಿದ್ದು, ಆ ಮಳಿಗೆಗಳು ಅಜಿತ್ ಸಿರ್ಸಿಕರ್ ಅವರಿಗೆ ಸೇರಿದೆ. ಆ ಮಳಿಗೆಯಲ್ಲಿ ರಾಜಸ್ಥಾನದ ಶ್ರವಣಕುಮಾರ ಅವರು ಬಾಡಿಗೆಗಿದ್ದಾರೆ. ಮಾರಿಕಾಂಬಾ ನಗರದಲ್ಲಿ ವಾಸವಾಗಿರುವ ಶ್ರವಣಕುಮಾರ ಅವರು ಆ ಮಳಿಗೆಯಲ್ಲಿ ಸ್ಟೇಶನರಿ ಅಂಗಡಿ ನಡೆಸುತ್ತಿದ್ದಾರೆ.
ನವೆಂಬರ್ 27ರಂದು ಅಂಗಡಿಗೆ ಅಳವಡಿಸಿದ್ದ ಸಿಸಿ ಕ್ಯಾಮರಾದ ಕೇಬಲ್ ಜೋತು ಬಿದ್ದಿರುವುದನ್ನು ಶ್ರವಣಕುಮಾರ ಅವರು ನೋಡಿದ್ದಾರೆ. ಅಂಗಡಿಯ ಮೇಲೆ ಹತ್ತಿ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದಾರೆ. ಆಗ, ಅಲ್ಲಿಗೆ ಬಂದ ವಿವೇಕ ಪೆಡ್ನೇಕರ್ ಅವರು `ಅಂಗಡಿ ಮೇಲೆ ಏಕೆ ಹತ್ತಿರುವೆ?’ ಎಂದು ಪ್ರಶ್ನಿಸಿದ್ದಾರೆ. ಆಗ, ಅವರಿಬ್ಬರ ನಡುವೆ ಜಗಳ ಶುರುವಾಗಿದ್ದು, ಅದು ವಿಕೋಪಕ್ಕೆ ತೆರಳಿದೆ. ಪರಸ್ಪರ ಅವರಿಬ್ಬರು ಕೆಟ್ಟದಾಗಿ ಬೈದುಕೊಂಡು, ಹೊಡೆದಾಟ ಶುರು ಮಾಡಿದ್ದಾರೆ.
ಆಗ, ಶ್ರವಣಕುಮಾರ ಅವರು ಅಜೀತ ಸಿರ್ಸಿಕರ್ ಅವರಿಗೆ ಫೋನ್ ಮಾಡಿದ್ದಾರೆ. ಅಜಿತ್ ಸಿರ್ಸಿಕರ್ ಅವರು ಅಲ್ಲಿಗೆ ಆಗಮಿಸಿದ್ದು, ಆ ಮೂವರು ಪರಸ್ಪರ ಇಟ್ಟಿಗೆಯಿಂದ ಹೊಡೆದಾಟ ನಡೆಸಿದ್ದಾರೆ. ಪರಿಣಾಮ ಶ್ರವಣಕುಮಾರ ಹಾಗೂ ವಿವೇಕ ಪೆಡ್ನೇಕರ್ ಅವರಿಗೆ ಅಲ್ಲಲ್ಲಿ ಗಾಯವಾಗಿದೆ.