ಕಾಶ್ಮೀರದಿಂದ ಮಂಗಳೂರಿಗೆ ಹೋಗುತ್ತಿದ್ದ ಕಾಶ್ಮೀರಿ ಸೇಬು ತುಂಬಿದ ಲಾರಿ ಅಂಕೋಲಾದ ಬಾಳೆಗುಳಿ ತಿರುವಿನಲ್ಲಿ ಪಲ್ಟಿಯಾಗಿದೆ. ಹೀಗಾಗಿ ಸೋಮವಾರ ಸಂಜೆ ರಸ್ತೆ ತುಂಬ ಸೇಬು ಬಿದ್ದಿದ್ದು, ಮಂಗಳವಾರ ಬೆಳಗ್ಗೆ ಅದನ್ನು ತೆರವು ಮಾಡಲಾಗಿದೆ.
ಈ ಭಾಗದ ರಾಷ್ಟ್ರೀಯ ಹೆದ್ದಾರಿ ತುಂಬ ಹೊಂಡಗಳು ತುಂಬಿವೆ. ಎಲ್ಲಾ ಕಡೆ ಹೊಂಡ ತಪ್ಪಿಸಿಕೊಂಡು ಬಂದ ಸೇಬು ಲಾರಿ ಚಾಲಕನಿಗೆ ಬಾಳೆಗುಳಿ ತಿರುವಿನಲ್ಲಿ ಅಪಘಾತ ತಪ್ಪಿಸಲು ಸಾಧ್ಯವಾಗಲಿಲ್ಲ. ಇಲ್ಲಿ ಲಾರಿ ಪಲ್ಟಿಯಾಗಿದ್ದರಿಂದ ಸೇಬು ಹಣ್ಣಿನ ಬಾಕ್ಸುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದವು. ಹೆದ್ದಾರಿಯಲ್ಲಿದ್ದ ಹೊಂಡಗಳು ಸೇಬು ಹಣ್ಣಿನಿಂದ ತುಂಬಿದವು.
ಕೆಲ ವಾಹನಗಳು ಸೇಬು ಹಣ್ಣಿನ ಮೇಲೆಯೇ ಹತ್ತಿ ಮುಂದೆ ಸಾಗಿದವು. ಇನ್ನೂ ಕೆಲ ವಾಹನದವರು ಸೇಬು ಹಣ್ಣಿನ ಗಾಡಿ ಪಲ್ಟಿಯಾಗಿದನ್ನು ನೋಡಿ ಮರುಕವ್ಯಕ್ತಪಡಿಸಿದರು. ಅನೇಕರು ಹೆದ್ದಾರಿ ತುಂಬಿದ ಹಣ್ಣಿನ ಪೋಟೋ ಕ್ಲಿಕ್ಕಿಸಿದರು
ಲಾರಿ ಪಲ್ಟಿಯಾದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದ್ದಿದ್ದು ಕ್ರೇನ್ ಸಹಾಯದಿಂದ ಲಾರಿ ಮೇಲೆತ್ತಿದರು.