ಜನರ ಬೇಡಿಕೆಯಂತೆ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿಲ್ಲ. ಶಿರಸಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ ನಡೆದಿಲ್ಲ. ಡಕೋಟಾ ಬಸ್ಸುಗಳ ಓಡಾಟ ನಿಂತಿಲ್ಲ. ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆದಿಲ್ಲ. ಜಿಲ್ಲೆ ವಿಭಜನೆ ವಿಷಯ ಮುನ್ನಲೆಗೆ ಬಂದಿಲ್ಲ. ಭ್ರಷ್ಟಾಚಾರ ಕಡಿಮೆ ಆಗಿಲ್ಲ. ಪ್ರವಾಹಪೀಡಿತ ಪ್ರದೇಶದವರ ಸಮಸ್ಯೆ ಬಗೆಹರಿದಿಲ್ಲ. ಕಳಪೆ ಕಾಮಗಾರಿಗಳು ನಿಂತಿಲ್ಲ. ಊರು ಅಭಿವೃದ್ಧಿ ಆಗಿಲ್ಲ. ಅದಾಗಿಯೂ, ಈ ಎಲ್ಲಾ ವಿಷಯಗಳ ಬಗ್ಗೆ ಧ್ವನಿಯಾಗುತ್ತಿದ್ದ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಎರಡು ತಿಂಗಳಿನಿoದ ಹೋರಾಟವನ್ನೇ ನಡೆಸಿಲ್ಲ!
Advertisement. Scroll to continue reading.
ಸುಸಜ್ಜಿತ ಆಸ್ಪತ್ರೆ ಬೇಡಿಕೆ ಮುಂದಿಟ್ಟು ಅನಂತಮೂರ್ತಿ ಹೆಗಡೆ ಅವರು ಪಾದಯಾತ್ರೆ ನಡೆಸಿದ್ದರು. ಪ್ರತ್ಯೇಕ ಜಿಲ್ಲೆ ಬೇಡಿಕೆಗಾಗಿ ಪ್ರತಿ ತಾಲೂಕಿನಲ್ಲಿ ಸಭೆ ಮಾಡಿದ್ದರು. ಡಕೋಟಾ ಬಸ್ಸುಗಳ ಓಡಾಟದ ಬಗ್ಗೆ ದಾಖಲೆಗಳ ಜೊತೆ ಪ್ರಶ್ನಿಸಿದ್ದರು. ಶಿರಸಿ ಹೈಟೆಕ್ ಆಸ್ಪತ್ರೆಯ ಲೋಪಗಳನ್ನು ಜನರ ಮುಂದೆ ತೆರೆದಿಟ್ಟಿದ್ದರು. ರಸ್ತೆಯಲ್ಲಿ ಗುಂಡಿ ಬಿದ್ದ ವಿಷಯವಾಗಿ ನಿರ್ವಹಣೆ ನಡೆಸುವ ಕಂಪನಿಯನ್ನು ತರಾಠೆಗೆ ತೆಗೆದುಕೊಂಡಿದ್ದರು. ಪ್ರವಾಹ ಪೀಡಿತ ಊರಿನ ಜನರಿಗಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋಗಿದ್ದರು. ಕಳಪೆ ಕಾಮಗಾರಿ, ಭ್ರಷ್ಟಾಚಾರ ವಿಷಯವಾಗಿಯೂ ಅನಂತಮೂರ್ತಿ ಹೆಗಡೆ ಅವರು ಕಿಡಿಕಾರಿದ್ದರು. ಸದಾ ಒಂದಿಲ್ಲೊಂದು ಹೋರಾಟಗಳ ಮೂಲಕ ಅನಂತಮೂರ್ತಿ ಹೆಗಡೆ ಅವರು ಜನರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳಿನಿಂದ ಅನಂತಮೂರ್ತಿ ಹೆಗಡೆ ಹೋರಾಟಗಳಿಂದ ದೂರ ಉಳಿದ್ದಿದ್ದಾರೆ!
ಬಿಜೆಪಿ ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ಅನಂತಮೂರ್ತಿ ಹೆಗಡೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ವಿರುದ್ಧ ಸಾಕಷ್ಟು ಬಾರಿ ಮಾತನಾಡಿದ್ದರು. ಹಳಿಯಾಳದ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಅವರ ವಿರುದ್ಧವೂ ಕಿಡಿಕಾರಿದ್ದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರ ವಿರುದ್ಧವೂ ಒಮ್ಮೆ ಪ್ರತಿಭಟಿಸಿದ್ದರು. ಜಿಲ್ಲಾ ವಿಭಜನೆ ವಿಷಯವಾಗಿ ಅವರು ಆಡಿದ ಮಾತು ಕನ್ನಡ ಸಂಘಟನೆಯ ಭಾಸ್ಕರ ಪಟಗಾರ ಅವರನ್ನು ಕೆರಳಿಸಿದ್ದು, `ರಕ್ತಕ್ರಾಂತಿ’ಯ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಅದಾದ ನಂತರ ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಅವರು ಕೆಲ ಹೋರಾಟ ಶುರು ಮಾಡಿದ್ದರು. ಮುಖ್ಯವಾಗಿ ಶಿರಸಿ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರ ಲೋಪಗಳನ್ನು ಜನರ ಮುಂದೆ ತೆರೆದಿಡುವ ಕೆಲಸ ಮಾಡುತ್ತಿದ್ದರು. ಆರ್‌ಟಿಐ ಮೂಲಕ ವಿವಿಧ ದಾಖಲೆಗಳನ್ನುಪಡೆದು ಕಾನೂನುಮಾನ್ಯತೆಯಿರುವ ಅಂಶವನ್ನು ಜನರ ಮುಂದೆ ಬಿಚ್ಚಿಡುತ್ತಿದ್ದರು. ಆದರೆ, ಸಾಮಾಜಿಕ ಹೋರಾಟಗಾರರಾಗಿರುವ ಅನಂತಮೂರ್ತಿ ಹೆಗಡೆ ಅವರು ಸದ್ಯ ತಮ್ಮ ಸಾಮಾಜಿಕ ಜೀವನದಿಂದ ದೂರ ಉಳಿದಿದ್ದಾರೆ!
ಯಾವುದೇ ಹೋರಾಟ ನಡೆಸುವ ಮುನ್ನ ಅನಂತಮೂರ್ತಿ ಹೆಗಡೆ ಅವರು ಸುದ್ದಿಗೋಷ್ಠಿಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದರು. ಸಂಬoಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಸೌಮ್ಯವಾಗಿಯೇ ಮಾತನಾಡುತ್ತಿದ್ದರು. ತಮ್ಮ ಬೇಡಿಕೆ ಈಡೇರಿಕೆಗೆ ನಿಗದಿತ ಗಡುವು ನೀಡುತ್ತಿದ್ದರು. ನೀಡಿದ ಸಮಯ ಮುಗಿದ ಮರುದಿನವೇ ಹೋರಾಟ ಶುರು ಮಾಡುತ್ತಿದ್ದರು. ತಮ್ಮ ಹೋರಾಟವನ್ನು ಸಹ ಅವರು ಅಚ್ಚುಕಟ್ಟಾಗಿ ಸಂಘಟಿಸುವುದರ ಜೊತೆ ಜನ ಬೆಂಬಲಪಡೆದು ಮುನ್ನುಗ್ಗುತ್ತಿದ್ದರು. ತಮ್ಮ ಪ್ರತಿ ಹೋರಾಟದಲ್ಲಿಯೂ ಅನಂತಮೂರ್ತಿ ಹೆಗಡೆ ಅವರು `ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂಬ ಭರವಸೆ ನೀಡುತ್ತಿದ್ದರು. ಆದರೆ, ಶಿರಸಿ ಹೈಟೆಕ್ ಆಸ್ಪತ್ರೆ ವಿಚಾರವಾಗಿ ಸೆಪ್ಟೆಂಬರ್ 22ರಂದು ಅವರು ಹೋರಾಟದ ಎಚ್ಚರಿಕೆ ನೀಡಿದ್ದು ಬಿಟ್ಟರೆ ಅದಾಗಿ ಒಂದು ತಿಂಗಳ ನಂತರ ಹೋರಾಟ ಶುರು ಮಾಡಲಿಲ್ಲ. ಶಿರಸಿಯಲ್ಲಿ ಸಾಮಾಜಿಕ ಜೀವನಕ್ಕೆ ಕಾಲಿರಿಸಿದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅನಂತಮೂರ್ತಿ ಹೆಗಡೆ ಅವರು ಹೋರಾಟದಿಂದ ಹಿಂದುಳಿದು ಸುದೀರ್ಘ ವಿರಾಮಪಡೆದಿದ್ದಾರೆ!
ಅನಂತಮೂರ್ತಿ ಹೆಗಡೆ ಅವರು ತಮ್ಮದೇ ವಿಶ್ವಂಭರ ಎಂಬ ವಾರ ಪತ್ರಿಕೆ ನಡೆಸುತ್ತಾರೆ. ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿದ್ದಾರೆ. ದೇವಸಸ್ಯ ಎಂಬ ಸಿನಿಮಾ ನಿರ್ಮಾಣಕ್ಕೂ ಅವರು ಕೈ ಹಾಕಿದ್ದಾರೆ. ಈ ಎಲ್ಲಾ ಕ್ಷೇತ್ರದಿಂದ ಬಂದ ಆದಾಯದಲ್ಲಿ ಅಲ್ಪಭಾಗವನ್ನು ಅವರು ಸಮಾಜ ಸೇವೆಗೆ ಮೀಸಲಿರಿಸಿದ್ದು, ನೊಂದವರಿಗೆ ನೆರವಾಗುತ್ತಿದ್ದಾರೆ. ನಿರಂತರ ಹೋರಾಟ, ಸಮಸ್ಯೆಗೆ ಸಿಲುಕಿದವರಿಗೆ ಸಹಾಯ, ಸಂಪರ್ಕಿಸಿದ ಪ್ರತಿಯೊಬ್ಬರಿಗೂ ಸ್ಪಂದನೆ ನೀಡುವ ಮೂಲಕ ಅನಂತಮೂರ್ತಿ ಹೆಗಡೆ ಅವರು ಹಂತ ಹಂತವಾಗಿ ಜನರಿಗೆ ಹತ್ತಿರವಾಗುತ್ತಿದ್ದರು. ಆದರೆ, ಸದ್ಯ ಅವರು ಪ್ರಚಲಿತ ವಿದ್ಯಮಾನಗಳಿಂದ ದೂರವಿರುವುವ ಬಗ್ಗೆ ಅನೇಕರು ಅನುಮಾನವ್ಯಕ್ತಪಡಿಸಿದ್ದಾರೆ. `ತಮ್ಮ ಉದ್ದಿಮೆ, ಸಿನಿಮಾ ಹಾಗೂ ಪತ್ರಿಕೆಯ ಕೆಲಸಗಳಿಂದ ಹೋರಾಟಕ್ಕೆ ಪುರಸೋತ್ತಾಗಿಲ್ಲ. ಶೀಘ್ರದಲ್ಲಿಯೇ ಎಲ್ಲಾ ಸಮಸ್ಯೆಗಳ ವಿರುದ್ಧ ಮತ್ತೆ ಹೋರಾಟ ಶುರು ಮಾಡುವೆ’ ಎಂದವರು ಮೊಬೈಲ್ ಮಿಡಿಯಾ ನೆಟ್‌ವರ್ಕ’ಗೆ ಪ್ರತಿಕ್ರಿಯಿಸಿದ್ದಾರೆ.