ಅoಕೋಲಾದ ಬೆಳಂಬಾರದ ಜಗದೀಶ ಖಾರ್ವಿ ಅವರಿಗೆ ಮೋಸವಾಗಿದೆ. ಜಗದೀಶ ಖಾರ್ವಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 3.75 ಲಕ್ಷ ರೂ ಹಣವನ್ನು ಅಲ್ಲಿದ್ದ ಸುಹಾಸ ಬಿ ಎಸ್ ಎಂಬಾತರು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ!
ಅoಕೋಲಾ ಬೆಳಂಬಾರದ ಮಧ್ಯಖಾರ್ವಿವಾಡದಲ್ಲಿ ಜಗದೀಶ ಯಶ್ವಂತ ಖಾರ್ವಿ ಅವರು ವಾಸವಾಗಿದ್ದಾರೆ. ವ್ಯವಹಾರಸ್ಥರಾಗಿರುವ ಅವರು ಅಕ್ಟೊಬರ್ 10ರಂದು ತಮ್ಮ ಕೆಲಸವೊಂದಕ್ಕಾಗಿ ಕಚೇರಿಯೊಂದಕ್ಕೆ ಹೋಗಿದ್ದರು. ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬರು ತಮ್ಮನ್ನು ಸುಹಾಸ್ ಬಿ ಎಸ್ ಎಂದು ಪರಿಚಯಿಸಿಕೊಂಡರು. `ತಾನು ಬೆಂಗಳೂರಿನಲ್ಲಿ ಎನ್ ಜಿ ಓ ನಡೆಸುತ್ತಿದ್ದು, ಅದರ ಮೂಲಕ ಕಡಿಮೆ ಬೆಲೆಗೆ ಒಳ್ಳೆಯ ಲಾಪ್‌ಟಾಪ್ ಕೊಡುವೆ’ ಎಂದು ವಿವರಿಸಿದರು.
ಕಡಿಮೆ ಬೆಲೆಗೆ ಒಳ್ಳೆಯ ಲಾಪ್‌ಟಾಪ್ ಸಿಗುವ ಬಗ್ಗೆ ಅರಿತ ಜಗದೀಶ ಖಾರ್ವಿ ಅವರು `ತಮಗೂ 15 ಲಾಪ್‌ಟಾಪ್ ಬೇಕು’ ಎಂದು ತಿಳಿಸಿದರು. ಸ್ವಂತ ಕೆಲಸಕ್ಕಾಗಿ ಎಚ್ ಪಿ ಕಂಪನಿಯ ಲ್ಯಾಪಟಾಪ್ ಪೂರೈಸುವಂತೆ ಕೋರಿದರು. ಇದಕ್ಕಾಗಿ ಮುಂಗಡ ಹಣ ಎಂದು 3.75 ಲಕ್ಷ ರೂ ಪಾವತಿಸಿದರು. ಆದರೆ, ಆ ದಿನ ಸುಹಾಸ ಬಿ ಎಸ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ಮತ್ತೆ ಭೇಟಿ ಆಗಲಿಲ್ಲ. ಸಂಪರ್ಕಕ್ಕೂ ಸಿಗಲಿಲ್ಲ.
ಕಡಿಮೆ ಬೆಲೆಗೆ ಲಾಪ್‌ಟಾಪ್ ಸಿಗುತ್ತದೆ ಎಂದು ನಂಬ ಕಾಸು ಕೊಟ್ಟಿದ್ದ ಜಗದೀಶ ಖಾರ್ವಿ ಅವರು ಮೋಸವಾಗಿರುವುದನ್ನು ಅರಿತರು. ಮೋಸ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸ್ ದೂರು ನೀಡಿದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯ ಶೋಧ ಶುರು ಮಾಡಿದ್ದಾರೆ.