ಯಕ್ಷ ರಂಗಕ್ಕೆ ನೂರಾರು ಶಿಷ್ಯರನ್ನು ಕೊಡುಗೆಯಾಗಿ ನೀಡಿದ ಕೆ ಪಿ ಹೆಗಡೆ ಅವರಿಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ. ಐದು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿರುವ ಕೃಷ್ಣ ಪರಮೇಶ್ವರ ಹೆಗಡೆ ಅವರ ಸೇವೆಯನ್ನು ಕರ್ನಾಟಕ ಸರ್ಕಾರ ಗುರುತಿಸಿದೆ.
`ಕೆಪಿ ಹೆಗಡೆ ಅವರು ಅತ್ಯಂತ ಮುಗ್ದರು. ಅಷ್ಟೇ ನಾಚಿಕೆ ಸ್ವಭಾವದವರು. ಯಾರನ್ನು ದ್ವೇಷಿಸದ ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳದ ಅವರು ಯಾರೇ ಮಾತಿಗೆ ಸಿಕ್ಕರೂ `ಆರಾಮು’ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದರು. ಯಾರನ್ನು ಅವರು ತಾವಾಗಿಯೇ ಮುಂದೆ ಬಂದು ಮಾತನಾಡಿಸುವುದಿಲ್ಲ. ಯಾರಾದರೂ ಕರೆದು ಮಾತನಾಡಿಸಿದರೂ ನಗು ಬಿಟ್ಟು ಬೇರೆ ಕೇಳುವುದಿಲ್ಲ. ಈಗಲೂ ಅವರು ಹಾಗೇ ಇದ್ದಾರೆ!
1959ರಲ್ಲಿ ಸಿದ್ದಾಪುರ ತಾಲೂಕಿನ ಗೊಳಗೋಡಿನಲ್ಲಿ ಜನಿಸಿದ ಕೆಪಿ ಹೆಗಡೆ ಅವರು ಶಾಲೆಗೆ ಹೋಗುವಾಗಲೇ ಮನೆಯಿಂದ ಮೂರು ಮೈಲಿ ದೂರದಲ್ಲಿ ಹೊಸ್ತೋಟ ಮಂಜುನಾಥ ಭಟ್ಟರು ನಡೆಸುವ ತರಬೇತಿಯಲ್ಲಿ ಅವರು ಕಲಿಯುತ್ತಿದ್ದರು. ತಮ್ಮ 17ನೇ ವಯಸ್ಸಿನಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಸೇರಿದರು. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಂದ ಬೈಸಿಕೊಂಡು ನಂತರ ಚೇತರಿಸಿಕೊಂಡ ಅವರು ನಾಡಿನ ಹೆಮ್ಮೆಯ ಕಲಾವಿದರಾಗಿ ಗುರುತಿಸಿಕೊಂಡರು.
ಯಕ್ಷಗಾನದ ವಿಷಯದಲ್ಲಿ ಮಾತ್ರ ಹೆಗಡೆ ಅವರು ಪರಿಪೂರ್ಣ ವ್ಯಕ್ತಿ. ಯಾವ ಸಮಯದಲ್ಲಿ ಯಾವ ಆಖ್ಯಾನವನ್ನು ಮುಗಿಸಬೇಕು ಎನ್ನುವ ಸಮಯ ಪ್ರಜ್ಞೆಯಿಂದಲೇ ಅವರು ಪ್ರಸಿದ್ಧಿಪಡೆದವರು. ಈ ಕಾರಣದಿಂದಲೇ ಐದು ದಶಕಗಳ ಕಾಲ ಯಾವ ಕಪ್ಪು ಚುಕ್ಕೆ ಇಲ್ಲದೆ ರಂಗವನ್ನು ಆಳಿದ್ದು, ಆ ಸೇವೆಯನ್ನು ಸರ್ಕಾರ ಗುರುತಿಸಿದೆ.