ಸರಳ, ಸಜ್ಜನ, ಶುದ್ಧಹಸ್ತದ ರಾಜಕಾರಣಿ ಎಂದು ಬಿಂಬಿತವಾಗಿದ್ದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೀಗ ವಿವಾದದ ಕೇಂದ್ರವಾಗಿದ್ದಾರೆ. ರಾಷ್ಟ್ರಗೀತೆ ಹಾಗೂ ಭ್ರಷ್ಟಾಚಾರ ವಿಷಯವಾಗಿ ಅವರ ಹೆಸರು ಮುನ್ನೆಲೆಗೆ ಬಂದಿದೆ.
Advertisement. Scroll to continue reading.
ಇದೇ ಮೊದಲ ಬಾರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅದರೊಂದಿಗೆ `ವಂದೇ ಮಾತರಂ’ ಕುರಿತು ಕಾಗೇರಿ ಅವರು ಮಾಡಿದ ಭಾಷಣವೊಂದು ವೈರಲ್ ಆಗಿದ್ದು, ಅದನ್ನು ವಿವಾದ ಎಂದು ಬಿಂಬಿಸಲಾಗಿದೆ. ಈ ಎರಡೂ ಕಾರಣದಿಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಯ ವಿಷಯವಾಗಿದ್ದಾರೆ. ಕಾಗೇರಿ ವಿರೋಧಿಸುವವರಿಗೆ ಈ ವಿವಾದಿತ ವಿಷಯ ಆಹಾರವಾಗಿದೆ.
ವಿಧಾನಸಭೆಯ ಸಭಾಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ಕೋಟ್ಯಂತರ ರೂ ದುಂದುವೆಚ್ಚ ನಡೆದ ಬಗ್ಗೆ `ದ ಫೈಲ್’ ತನಿಖಾ ವರದಿ ಪ್ರಕಟಿಸಿತ್ತು. ಆ ವರದಿ ಉಲ್ಲೇಖಿಸಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತನಿಖೆಗೆ ಆಗ್ರಹಿಸಿದ್ದರು. ಅದರೊಂದಿಗೆ `ಯುಟಿ ಖಾದರ್ ಅವರು ಈ ಹಗರಣದಿಂದ ಹೊರಬರಲಿ. ಪಾರದರ್ಶಕವಾಗಿ ಸತ್ಯ ಹೊರಬರಲು ಹಾಲಿ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆಯಾಗಲಿ’ ಎಂದು ಈ ಮೊದಲು ವಿಧಾನಸಭೆ ಸಭಾಧ್ಯಕ್ಷರೂ ಆಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದ್ದರು.
ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ, ಶಾಸಕರ ಭವನಕ್ಕೆ ಹಾಸಿಗೆ-ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶ ಅಧ್ಯಯನ ಪ್ರವಾಸ, ಮತ್ತು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಮಾಡಿದ ಅಪಕೀರ್ತಿ ಹಾಗೂ ಉಚಿತ ಊಟ ತಿಂಡಿ ಸರಬರಾಜು ನೆಪದಲ್ಲಿ ಅಕ್ರಮ ನಡೆಸಿದ ಅನುಮಾನದ ಬಗ್ಗೆ ಕಾಗೇರಿ ಅವರು ಮಾತನಾಡಿದ್ದರು. ಕೋಟಿ ವೆಚ್ಚದಲ್ಲಿ ಬಾಗಿಲು ನಿರ್ಮಾಣ, ಅನಗತ್ಯ ನೆಲಹಾಸು, ಪುಸ್ತಕ ಮೇಳ ಹೆಸರಿನಲ್ಲಿ ದುಂದುವೆಚ್ಚ, ಎಐ ಕ್ಯಾಮರಾ ಹಾಗೂ ಟಿವಿ ಅಳವಡಿಕೆಯಲ್ಲಿ ಪಾರದರ್ಶಕತೆ ಇಲ್ಲದಿರುವುದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಸ್ತಾಪಿಸಿದ್ದರು. ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್, ಸ್ಟೇನ್‌ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್‌ಗಳ ಖರೀದಿಯಲ್ಲಿನ ದರಪಟ್ಟಿ ಲೋಪಗಳ ಬಗ್ಗೆ ವಿವರಿಸಿದ್ದರು. ಹಣಕಾಸು ಇಲಾಖೆ ಅನುಮತಿ ಇಲ್ಲದೇ ಈ ಎಲ್ಲಾ ಕೆಲಸ ನಿರ್ವಹಿಸಿದ ಬಗ್ಗೆ ಆಕ್ಷೇಪಿಸಿದ್ದು, ರಾಜ್ಯ ಸರ್ಕಾರಕ್ಕೆ ತಲೆನೋವಿನ ವಿಷಯವಾಯಿತು. ಹೀಗಾಗಿ ಕಾಗೇರಿ ಅವರು ವಿಧಾನಸಭಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಹಗರಣಗಳನ್ನು ರಾಜ್ಯ ಸರ್ಕಾರವೇ ಹೊರತೆಗೆಯುವ ಪ್ರಯತ್ನ ನಡೆಸಿತು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆ ಅಧ್ಯಕ್ಷರಾಗಿರುವಾಗ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ರಾಜ್ಯ ಸರ್ಕಾರದ ರಾಜಕಾರಣಿಗಳು ದೂರಿದರು. ಇಷ್ಟು ದಿನ ಮೌನವಾಗಿದ್ದವರು ಇದೀಗ ಗುಡುಗುತ್ತಿರುವುದೇತಕೆ? ಎಂಬ ಪ್ರಶ್ನೆ ಉದ್ಬವಿಸಿದಾಗ ಆ ಗುಡುಗು ಕಡಿಮೆಯಾಯಿತು. ಅದಾಗಿಯೂ, ಕೆಲಸ ಆಗುವ ಮುನ್ನವೇ ಖಾಸಗಿ ಕಂಪನಿಗೆ 5 ಕೋಟಿ ರೂ ವೆಚ್ಚದಲ್ಲಿ ವೈಫೈ ನೆಟ್‌ವರ್ಕ ಅಳವಡಿಸಲು ಹಣ ಪಾವತಿ, ಶಾಸಕರ ಓಟಾಟಕ್ಕೆ ಕಾರು ಖರೀದಿಗೂ ಬಿಜೆಪಿ ಪ್ರಭಾವಿಗಳ ಒಡೆತನದ ಶೋರೂಮಿಗೆ ಟೆಂಡರ್ ನೀಡಿರುವುದು ಹಾಗೂ ಅಧಿವೇಶನಗಳ ನೇರ ಪ್ರಸಾರಕ್ಕೆ ಉಚಿತ ಅವಕಾಶವಿದ್ದರೂ 3 ಕೋಟಿ ರೂ ವೆಚ್ಚದಲ್ಲಿ ಟೆಂಡರ್ ನೀಡಿರುವ ಆರೋಪಗಳು ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸುತ್ತುವರೆದಿದೆ. `ವಿಧಾನಸೌಧದಲ್ಲಿ ಈಗಲೂ ಸರಿಯಾಗಿ ವೈಫೈ ಸಿಗುತ್ತಿಲ್ಲ. ಟಯೋಟಾ ಕಂಪನಿಗೆ ಕೊಡುತ್ತಿದ್ದ ಕಾರಿನ ಟೆಂಡರ್ ಶೋರೂಂ ಪಾಲಾಗಿದ್ದು, ಅದರಲ್ಲಿ ಅಕ್ರಮ ನಡೆದಿದೆ. ಜೊತೆಗೆ ಉಚಿತ ಪ್ರಸಾರಕ್ಕೂ ಅನಗತ್ಯ ಹಣ ವೆಚ್ಚ ಮಾಡಲಾಗಿದೆ’ ಎಂದು ಸದ್ಯದ ಸಭಾಧ್ಯಕ್ಷ ಯುಟಿ ಖಾದರ್ ಅವರು ಕಾಗೇರಿ ಅವರ ಆರೋಪಕ್ಕೆ ಪ್ರತಿಯಾಗಿ ತಮ್ಮ ಆರೋಪ ಮಾಡಿದ್ದಾರೆ.
ಇದರೊಂದಿಗೆ ರಾಷ್ಟ್ರಗೀತೆ ವಿಷಯವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಡಿದ ಮಾತು ಅನೇಕರನ್ನು ಕೆರಳಿಸಿದೆ. ಇದಕ್ಕೆ ಪ್ರತಿಯಾಗಿ ಅನೇಕ ರಾಜಕಾರಣಿಗಳು ಕಾಗೇರಿ ಅವರ ಮಾತನ್ನು ಖಂಡಿಸುತ್ತಿದ್ದಾರೆ. `ಜನಗಣಮನ ಎಂಬುದು ಬ್ರಿಟಿಷರನ್ನು ಸ್ವಾಗತಿಸಲು ರಚಿಸಿದ ಗೀತೆ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದನ್ನು ಅನೇಕರು ಖಂಡಿಸಿದ್ದಾರೆ. ಜೊತೆಗೆ ಅನೇಕರು `ವಂದೇ ಮಾತರಂ ಗೀತೆ ದೇಶದ ರಾಷ್ಟçಗೀತೆ ಆಗಬೇಕಿತ್ತು’ ಎಂದು ಕಾಗೇರಿ ಹೇಳಿದನ್ನು ಸ್ವಾಗತಿಸಿದ್ದಾರೆ. ಎರಡು ವಿಷಯದ ಚರ್ಚೆಯನ್ನು ಮೌನವಾಗಿ ಆಲಿಸಯತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸದ್ಯದ ಸ್ಥಿತಿಯಲ್ಲಿ `ತಾನೇನೂ ತಪ್ಪು ಮಾತನಾಡಿಲ್ಲ’ ಎಂದು ಸುಮ್ಮನಿದ್ದಾರೆ.