ಕಾರವಾರ-ಕಡವಾಡ ರಸ್ತೆ ಬಳಿ ಹೊಂಡ ತುಂಬಿದ್ದು, ವಾಹನ ಸವಾರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಲ್ಲಿನ ರಸ್ತೆ ಅಕ್ಕ-ಪಕ್ಕ ಗಿಡಗಂಟಿಗಳು ಬೆಳೆದಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.
Advertisement. Scroll to continue reading.
ಕಡವಾಡದ ಮೂಡದೇವ ದೇವಸ್ಥಾನದಿಂದ ವೈಲವಾಡದವರೆಗೂ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಮಾರ್ಗವಾಗಿ ಭಾರೀ ಗಾತ್ರದ ಸರಕು ಸಾಗಾಟ ವಾಹನ ಸಂಚರಿಸುತ್ತಿದ್ದು, ಎದುರಿನಿಂದ ಬರುವ ಸಣ್ಣ-ಪುಟ್ಟ ವಾಹನಗಳ ಓಡಾಟಕ್ಕೆ ಸ್ಥಳಾವಕಾಶವೇ ಸಿಗುತ್ತಿಲ್ಲ. ಅದರಲ್ಲಿಯೂ ರಸ್ತೆಯುದ್ದಕ್ಕೂ ಬಿದ್ದಿರುವ ಹೊಂಡಗಳು ಜನರ ಜೀವಕ್ಕೆ ಮಾರಕವಾಗಿದೆ.
ಕೈಗಾ ಅಣು ವಿದ್ಯುತ್ ಘಟಕಕ್ಕೆ ತೆರಳುವ ವಾಹನಗಳು ಇದೇ ಮಾರ್ಗವಾಗಿ ಸಂಚರಿಸುತ್ತದೆ. ಅದರ ತೂಕ ಹೆಚ್ಚಿರುವ ಪರಿಣಾಮ ಸಣ್ಣ-ಪುಟ್ಟ ಸೇತುವೆಗಳ ಮೇಲೆಯೂ ಗುಂಡಿ ಬಿದ್ದಿದೆ. ಇದರಿಂದ ಶಾಲೆ-ಕಾಲೇಜು ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ನಿತ್ಯ ಓಡಾಡುವ ಮಹಿಳೆಯರು ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಎಲ್ಲಾ ಸಮಸ್ಯೆ ಅರಿತ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ರಸ್ತೆ ದುರಸ್ಥಿಗಾಗಿ ಧ್ವನಿ ಎತ್ತಿದ್ದಾರೆ. `ಜಿಲ್ಲಾಡಳಿತ ಈ ರಸ್ತೆ ಅವ್ಯವಸ್ಥೆ ಬಗ್ಗೆ ಗಮನಹರಿಸಬೇಕು. ರಸ್ತೆ ಸರಿಪಡಿಸಲು ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.