ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಅವರು 25ಕ್ಕೂ ಅಧಿಕ ಜನರ ತಂಡ ಕಟ್ಟಿಕೊಂಡು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾರೆ. ಜಾಗದ ವಿಷಯವಾಗಿ ಗಲಾಟೆ ನಡೆದ ನಂತರ ಜಿ ಜಿ ಶಂಕರ್ ಅವರು ಆ ಕಾರ್ಮಿಕರ ತಂಡಕ್ಕೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದು, ಅದೇ ಸಿಟ್ಟಿಗೆ ಜಾಗದ ಮಾಲಕ ಪೀಟರ್ ಹಾಗೂ ಕಾರ್ಮಿಕ ಜೋಯವಿನ್ ತಂಡದವರು ಸೇಫ್ ಸ್ಟಾರ್ ಸೊಸೈಟಿ ಸಿಬ್ಬಂದಿಗೆ ಬೆದರಿಕೆ ಒಡ್ಡುತ್ತಿದ್ದಾರೆ.
Advertisement. Scroll to continue reading.
ಜಿ ಜಿ ಶಂಕರ್ ಅವರು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ ತಪ್ಪಿಗೆ ಅವರ ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಷ್ಟ ಅನುಭವಿಸುತ್ತಿದ್ದಾರೆ. ಸೇಫ್ ಸ್ಟಾರ್ ಸೊಸೈಟಿಯ ಉದ್ಯೋಗಿಯಾಗಿರುವ ನಾಗರತ್ನ ಹಳ್ಳೇರ್ ಹಾಗೂ ಶ್ಯಾಮಲಾ ನಾಯ್ಕ ಅವರಿಗೆ ಜೀವ ಬೆದರಿಕೆ ಬಂದಿದೆ. ಅದರಲ್ಲಿಯೂ ಶ್ಯಾಮಲಾ ನಾಯ್ಕ ಅವರಿಗೆ ಅಪರಿಚಿತರು `ಟಿಪ್ಪರ್ ಹಾಯಿಸಿ ಕೊಲೆ ಮಾಡುವೆ‘ ಎಂದು ಹೆದರಿಸಿದ್ದಾರೆ.
ಡಿಸೆಂಬರ್ 9ರಂದು ಹೊನ್ನಾವರ ಮಾವಿನಕೂರ್ವಾ ಬಳಿಯ ಮಂಡಲಕೂರ್ವದ ಜೊಯವಿನ್ ಬಸ್ತೇಂವ್ ಮೆಂಡೋನ್ಸಾ ಅವರು ಪೀಟರ್ ಎಂಬಾತರ ಸೂಚನೆ ಮೇರೆಗೆ ಕೂಲಿ ಕೆಲಸಕ್ಕೆ ಹೋಗಿದ್ದರು. ಜೊಯವಿನ್ ಅವರ ಜೊತೆ ಅವರ ತಂದೆ ಬಸ್ತೇಂವ್ ಮೆಂಡೋನ್ಸಾ, ಪಾವ್ಲು ಡಿಕೋಸ್ತಾ ಸಹ ಇದ್ದರು. ಅವರೆಲ್ಲರೂ ಸೇರಿ ತಾರಿಬಾಗಿಲ ಬಳಿಯಿರುವ ಚರ್ಚಿನ ಬಳಿ ಅವರು ಕೆಲಸ ಮಾಡುತ್ತಿದ್ದರು. ಅಲ್ಲಿದ್ದ ಖಾಲಿ ಜಾಗವೊಂದನ್ನು ಸ್ವಚ್ಛ ಮಾಡುತ್ತಿರುವಾಗ ಅಲ್ಲಿ ಜಿ ಜಿ ಶಂಕರ್ ಅವರು ಆಗಮಿಸಿದರು. ಜಿ ಜಿ ಶಂಕರ್ ಅವರ ಜೊತೆ ಅಂಗಡಿ ಹಿತ್ತಲದ ಮೋಹನ ತಿಮ್ಮಪ್ಪ ಗೌಡ, ಅರುಣ ಮಂಜುನಾಥ ಗೌಡ, ದುರ್ಗಾಕೇರಿಯ ಕಿರಣ ಆರ್ ಹೊನ್ನಾವರಕರ್, ಹೊಂಡಗದ್ದೆಯ ಸತೀಶ ಗೋವಿಂದ ಗೌಡ ಬಂದಿದ್ದರು. ಕಾರಿನಲ್ಲಿ ಬಂದ ಅವರೆಲ್ಲರೂ ಏಕಾಏಕಿ ಕೆಲಸ ಮಾಡುತ್ತಿದ್ದವರನ್ನು ದಬಾಯಿಸಿದರು. ಸ್ವಚ್ಚತಾ ಕೆಲಸಕ್ಕೆ ಅಡ್ಡಿಪಡಿಸಿದ ಅವರೆಲ್ಲರೂ ಜಿ ಜಿ ಶಂಕರ್ ಅವರ ಜೊತೆಗೂಡಿ ಅಲ್ಲಿದ್ದವರ ಮೇಲೆ ದಾಳಿ ಮಾಡಿದರು.
ಅದಾದ ನಂತರ ಜಿ ಜಿ ಶಂಕರ್ ಅವರು ಮತ್ತೆ 25 ಜನರನ್ನು ಫೋನ್ ಮಾಡಿ ಕರೆಯಿಸಿಕೊಂಡರು. ಅವರೆಲ್ಲರೂ ಸೇರಿ ಅಲ್ಲಿದ್ದ ಪಾವ್ಲು ಅವರಿಗೆ ಹೊಡೆಯಲು ಶುರು ಮಾಡಿದರು. ಮೋಹನ ಗೌಡ ಅವರು ಪಾವ್ಲು ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದುಕೊಂಡ ಕಾರಣ ಅವರ ಕತ್ತು ಊದಿಕೊಂಡಿದ್ದು, ಪಾವ್ಲು ಅವರನ್ನು ತಪ್ಪಿಸಲು ಹೋದ ಜೊಯವಿನ್ ಅವರಿಗೂ ಅಲ್ಲಿದ್ದವರು ಥಳಿಸಿದರು. ಕೊನೆಗೆ ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರೂ ಹಾಗೂ ಹೀಗೋ ಮಾಡಿ ತಪ್ಪಿಸಿಕೊಂಡು ಆಸ್ಪತ್ರೆ ಸೇರಿದರು. ನಂತರ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಬಿಜೆಪಿ ಮುಖಂಡರೂ ಆಗಿರುವ ಸೇಫ್ ಸ್ಟಾರ್ ಸೊಸೈಟಿ ಅಧ್ಯಕ್ಷ ಜಿ ಜಿ ಶಂಕರ್ ಜೊತೆ ಇನ್ನಿತರರ ವಿರುದ್ಧ ದೂರು ಸಲ್ಲಿಸಿದರು. ಅದಾದ ನಂತರ ಜಿ ಜಿ ಶಂಕರ್ ಅವರು ಜೋಯವಿನ್ ಅವರ ಕೈಗೆ ಸಿಗಲಿಲ್ಲ. ಆದರೆ, ನಿತ್ಯವೂ ಕಚೇರಿಗೆ ಬರುತ್ತಿದ್ದ ಸೇಫ್ ಸ್ಟಾರ್ ಸೊಸೈಟಿ ಉದ್ಯೋಗಿಗಳು ಜೋಯವಿನ್ ಕಡೆಯವರ ಕಣ್ಣಿಗೆ ಬಿದ್ದರು. ಜಿ ಜಿ ಶಂಕರ್ ಅವರ ಮೇಲಿನ ಸಿಟ್ಟಿಗೆ ಜೋಯವಿನ್ ಕಡೆಯವರು ಸೇಫ್ ಸ್ಟಾರ್ ಸೊಸೈಟಿ ಸಿಬ್ಬಂದಿಗೆ ಕಾಟ ಕೊಡಲು ಶುರು ಮಾಡಿದರು. ಹೊನ್ನಾವರ ಮೂಡ್ಕಣಿಯ ನಾಗರತ್ನ ಗಣಪತಿ ಹಳ್ಳೇರ್ ಅವರು ಸೇಫ್ ಸ್ಟಾರ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿರುವುದನ್ನು ಅರಿತ ಜೋಯವಿನ್ ಮಂಡೋನ್ಸಾ ಹಾಗೂ ಪೀಟರ್ ಮಂಡೋನ್ಸಾ ಅವರು ನಾಗರತ್ನ ಹಳ್ಳೇರ್ ಅವರನ್ನು ಕಾಡಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ನಾಗರತ್ನ ಅವರಿಗೆ ಅವರಿಬ್ಬರು ಬೆದರಿಕೆ ಒಡ್ಡಿದರು. ನಾಗರತ್ನ ಹಳ್ಳೇರ್ ಅವರು ಸಾಲ ವಸೂಲಿಗಾಗಿ ಪ್ರಭಾತನಗರದ ಅಮೋಘ ಸೇಫ್ ಸ್ಟಾರ್ ಜಂಟಿ ಭದ್ರತಾ ಸಂಘದ ಬಳಿ ಹೊರಟಾಗ ಅವರನ್ನು ಹಿಂಬಾಲಿಸಿದರು. ನಾಗರತ್ನ ಹಳ್ಳೇರ್ ಅವರು ಸಾಲ ವಸೂಲಾತಿ ಮುಗಿಸಿ ಕೆಳಗಿನಪಾಳ್ಯ ಮಜಿರೆಯಲ್ಲಿದ್ದ ಜಿ ಜಿ ಶಂಕರ್ ಅವರನ್ನು ಮಾತನಾಡಿಸಲು ಹೋದಾಗ ಅಲ್ಲಿ ಜಗಳ ಶುರು ಮಾಡಿದರು. ನಾಗರತ್ನ ಹಳ್ಳೇರ್ ಅವರು `ಏಕೆ ಜಗಳ ಮಾಡುತ್ತೀರಿ?’ ಎಂದು ಪ್ರಶ್ನಿಸಿದ ಕಾರಣ ಜೋಯವಿನ್ ಮಂಡೋನ್ಸಾ ಅವರು ಮುಗಿಬಿದ್ದರು. ಪೀಟರ್ ಮಂಡೋನ್ಸಾ ಅವರು ನಾಗರತ್ನ ಅವರ ಕೂದಲು ಹಿಡಿದು ಎಳೆದಾಡಿದರು. ಜನ ಈ ಜಗಳ ತಪ್ಪಿಸಿದರು. ಅದಾದ ನಂತರ ಜೋಯವಿನ್ ಮಂಡೋನ್ಸಾ ಕಡೆಯವರು ಸೇಫ್ ಸ್ಟಾರ್ ಸೊಸೈಟಿಯ ಅಳ್ಳಂಕಿ ಶಾಖೆಯ ಫಿಲ್ಡ್ ಆಫೀಸರ್ ಶ್ಯಾಮಲಾ ಮಂಜುನಾಥ ನಾಯ್ಕ ಅವರನ್ನು ಹಿಂಬಾಲಿಸಿದರು. ಜಲವಳ್ಳಿ ಹಿರೆಹಿತ್ಲದಲ್ಲಿ ವಾಸವಾಗಿರುವ ಶ್ಯಾಮಲಾ ನಾಯ್ಕ ಅವರಿಗೂ ಬೆದರಿಕೆ ಒಡ್ಡಿದರು. ಡಿಸೆಂಬರ್ 11ರಂದು ಶ್ಯಾಮಲಾ ನಾಯ್ಕ ಅವರು ದಿಬ್ಬಣಗಲ್ ಕಡೆಯಿಂದ ಆಳಂಕಿ ಕಡೆ ಸ್ಕೂಟಿ ಮೇಲೆ ಹೋಗುವಾಗ ಅಪರಿಚಿತರು ಅವರನ್ನು ಅಡ್ಡಗಟ್ಟಿದರು. ಕವಲಕೇರಿಯ ನಿರ್ಜನ ಪ್ರದೇಶದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಇಬ್ಬರು ಶ್ಯಾಮಲಾ ಅವರನ್ನು ಕೆಟ್ಟದಾಗಿ ನಿಂದಿಸಿದರು. `ಜೋಯವಿನ್ ಹಾಗೂ ಪೀಟರ್ ವಿರುದ್ಧ ಸಾಕ್ಷಿ ಹೇಳುತ್ತೀಯಾ?’ ಎಂದು ಪ್ರಶ್ನಿಸಿದ ಆ ಆಗಂತುಕರು `ಈ ದೂರು ಹಿಂಪಡೆಯದೇ ಇದ್ದರೆ ಜೀವ ತೆಗೆಯುವೆ’ ಎಂದು ಬೆದರಿಸಿದರು. `ಟಿಪ್ಪರ್ ಲಾರಿ ಹಾಯಿಸಿ ಕೊಲೆ ಮಾಡುವೆ’ ಎಂಬ ಎಚ್ಚರಿಕೆ ನೀಡಿದರು. ಸದ್ಯ ಈ ಪ್ರಕರಣ ಪೊಲೀಸ್ ತನಿಖೆಯಲ್ಲಿದ್ದು, ಎರಡು ಕಡೆಯವರನ್ನು ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.