ಹೊನ್ನಾವರದ ಗೇರುಸೊಪ್ಪದಲ್ಲಿ ನಿರ್ಮಿಸಲು ಉದ್ದೇಶಿಸಿದ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ವಿರೋಧವ್ಯಕ್ತಪಡಿಸಿದೆ. ಈ ಯೋಜನೆಯನ್ನು ತಡೆಯುವಂತೆ ಕುಮಟಾ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ರವಾನಿಸಲಾಗಿದೆ.
`ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಅತ್ಯಂತ ಅಪರೂಪದ ಕಾಡುಹೊಂದಿದೆ. ವಿನಾಶದ ಅಂಚಿನಲ್ಲಿರುವ ಶಿಂಗಳಿಕ ಇಲ್ಲಿ ವಾಸಿಸುತ್ತಿದೆ. ಈ ಯೋಜನೆ ಜಾರಿಯಾದರೆ ಕಾಡಿನ ಜೊತೆ ಊರಿನವರಿಗೆ ಸಹ ಸಮಸ್ಯೆ ಆಗಲಿದೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಹೇಳಿದ್ದಾರೆ. `ಶರಾವತಿ ಪಂಪ್ ಸ್ಟೋರೇಜ್ ಅವೈಜ್ಞಾನಿಕ ಯೋಜನೆಯಾಗಿದೆ. ಕೇಂದ್ರ ಸರ್ಕಾರ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ ಬಗ್ಗೆ ಮಾಹಿತಿಯಿದ್ದು, ಕೂಡಲೇ ಇಂಥ ಯೋಜನೆಯನ್ನು ತಡೆಯಬೇಕು’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಒತ್ತಾಯಿಸಿದ್ದಾರೆ.
`ಶರಾವತಿ ಪಂಪ್ ಸ್ಟೋರೆಜ್ ಯೋಜನೆಯಿಂದ ವಿದ್ಯುತ್ ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ನಷ್ಟ ಆಗಲಿದೆ. ಅನೇಕರು ಈ ಯೋಜನೆಯಿಂದ ಬೀದಿಗೆ ಬರಲಿದ್ದಾರೆ. ಅಪಾರ ಪ್ರಮಾಣದಲ್ಲಿ ಅರಣ್ಯ ನಾಶ, ವನ್ಯಜೀವಿ ಸಂತತಿ ಹಾನಿ ಮಾಡುವ ಈ ಯೋಜನೆ ಅನುಷ್ಠಾನ ಯೋಗ್ಯವಲ್ಲ’ ಎಂದವರು ವಿವರಿಸಿದ್ದಾರೆ. `ಈ ಪ್ರಮಾಣದಲ್ಲಿ ಜನ ವಿರೋಧ ಇದ್ದರೂ ಯೋಜನೆಗೆ ಆಸಕ್ತಿವಹಿಸುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ. `ಈ ಯೋಜನೆ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು’ ಎನ್ನುವ ಬಗ್ಗೆ ಜನ ಸಹಿ ಸಂಗ್ರಹಿಸಿದ ಅವರು ಸಹಾಯಕ ಆಯುಕ್ತ ಶ್ರವಣಕುಮಾರ ಅವರ ಮೂಲಕ ಪತ್ರ ರವಾನಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಮುನ್ನಾ ಸಾಬ್, ತ್ಯಾಗರಾಜ್ ಮುಕ್ರಿ ಇತರರು ಯೋಜನೆಗೆ ವಿರೋಧವ್ಯಕ್ತಪಡಿಸಿದ್ದಾರೆ.