ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತದ ನಂತರ ಧಾರವಾಡದ ಐಐಟಿ ಪ್ರಾಧ್ಯಾಪಕ ಅಮರನಾಥ್ ಹೆಗಡೆ ಅವರು ಗುಡ್ಡ ಕುಸಿತದ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದು, ಜಿಲ್ಲೆಯಲ್ಲಿ ಇನ್ನಷ್ಟು ಅಪಾಯ ಸಂಭವಿಸಬಹುದಾದ ಆತಂಕದ ವಿಷಯ ಹೊರಬಿದ್ದಿದೆ.
ಧಾರವಾಡ ಐಐಟಿ ಸಿವಿಲ್ ಮತ್ತು ಮೂಲಸೌಕರ್ಯ ಎಂಜಿನಿಯರಿoಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮರನಾಥ್ ಹೆಗಡೆ ಮತ್ತು ಸಂಶೋಧನಾ ವಿದ್ಯಾರ್ಥಿ ಮಲಯ್ ಪ್ರಾಮಾಣಿಕ್ ಈ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಶಿರೂರು ಗುಡ್ಡದ ಉಪಗ್ರಹಗಳ ಚಿತ್ರಗಳು, ಈ ಹಿಂದಿನ ಆ ಪ್ರದೇಶಲ್ಲಾದ ಭೂಕುಸಿತದ ದಾಖಲೆಗಳು, ಮಣ್ಣಿನ ರಚನೆ, ಮಳೆ ಪ್ರಮಾಣ ಸೇರಿದಂತೆ ದತ್ತಾಂಶ ಸಂಗ್ರಹಿಸಿ, ಅದನ್ನು ವಿಶ್ಲೇಷಿಸಲಾಗಿದೆ. ಆ ಅವಧಿಯಲ್ಲಿ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಭವಿಷ್ಯದಲ್ಲಾಗುವ ಅಪಾಯದ ಅಂಶಗಳು ಹೊರಬಿದ್ದಿವೆ.
ಅಪಾಯದಲ್ಲಿ ಉತ್ತರ ಕನ್ನಡ ಈ ವರೆಗೆ ಪಶ್ಚಿಮ ಘಟ್ಟ ಹೊಂದಿರುವ ಜಿಲ್ಲೆಗಳಲ್ಲಿ ಆಗಿರುವ ಭೂಕುಸಿತಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲಿಯೇ ಅತಿ ಹೆಚ್ಚು ಕುಸಿತವಾಗಿದೆ. ಶೇ 30ರಷ್ಟು ಭೂಕುಸಿತಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಬಗ್ಗೆ ದಾಖಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತಗಳಿಗೆ ಮೂರು ಪ್ರಮುಖ ಅಂಶಗಳನ್ನು ಈ ಅಧ್ಯಯನ ಕಂಡುಕೊAಡಿದೆ. ವಾರ್ಷಿಕವಾಗಿ 3000 ಮಿಮೀಗಿಂತ ಹೆಚ್ಚಿನ ಮಳೆ, ಮಣ್ಣಿನ ರಚನೆ ಮತ್ತು 28 ಡಿಗ್ರಿಗಿಂತ ಹೆಚ್ಚಿನ ಕಡಿದಾದ ಇಳಿಜಾರು ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವುದು ವರದಿಯಿಂದ ಗೊತ್ತಾಗಿದೆ.
ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ನೈಸರ್ಗಿಕ ಮಳೆ ನೀರಿನ ಹರಿವಿಗೆ ಅಡ್ಡಿಯಾಗಿರುವುದು, ರಾಷ್ಟ್ರೀಯ ಹೆದ್ದಾರಿ-52ರ ವಿಸ್ತರಣೆ ಸೇರಿದಂತೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಕಾರ್ಯಗತಗೊಳಿಸಿರುವುದೇ ಭೂಕುಸಿತಕ್ಕೆ ಕಾರಣವಾಗಿದೆ. ಹಲವು ರಸ್ತೆ ಯೋಜನೆಗಳಲ್ಲಿ ವೈಜ್ಞಾನಿಕ ಗೋಡೆಗಳನ್ನು ನಿರ್ಮಿಸದೆ ಇಳಿಜಾರಿನ ತುದಿಯನ್ನು ಕತ್ತರಿಸಲಾಗಿದೆ. ಹೀಗಾಗಿ ನೀರಿನ ಸೋರಿಕೆಯಾಗಿ ಭೂಕುಸಿತಗಳಾಗುತ್ತವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.