ಶಿರಸಿ ದೇವನಳ್ಳಿಯ ಶಿರ್ಲೇಬೈಲಿನ ವೆಂಕಟು ಗೌಡ ಹಾಗೂ ಅವರ ಪತ್ನಿ ದೇವಕಿ ಗೌಡ ಸೇರಿ ಲೀಲಾವತಿ ಗೌಡ ಅವರಿಗೆ ಹಿಂಸೆ ನೀಡುತ್ತಿದ್ದಾರೆ. ಲೀಲಾವತಿ ಗೌಡ ಅವರ ಕುಟುಂಬದವರು ಓಡಾಡುವ ದಾರಿಗೂ ಅವರು ಬೇಲಿ ನಿರ್ಮಿಸಿದ್ದಾರೆ.
ಶಿರಸಿ ಮಂಜುಗುಣಿ ಬಳಿಯ ಕಸಗೆಯ ಲೀಲಾವತಿ ಮಂಜುನಾಥ ಗೌಡ ಅವರು ತಮ್ಮ ವೃದ್ಧ ತಂದೆ-ತಾಯಿ ಜೊತೆ ದೇವನಳ್ಳಿಯ ಶೀರ್ಲೇಬೈಲ್ ಬಳಿ ವಾಸವಾಗಿದ್ದಾರೆ. ಅವರ ಅಣ್ಣ ವೆಂಕಟು ಗಣಪತಿ ಗೌಡ ಹಾಗೂ ದೇವಕಿ ವೆಂಕಟು ಗೌಡ ಅವರು ಮೊದಲಿನಿಂದಲೂ ಲೀಲಾವತಿ ಗೌಡ ಅವರಿಗೆ ತೊಂದರೆ ನೀಡುತ್ತ ಬಂದಿದ್ದಾರೆ. ಮನೆ ಮತ್ತು ಜಾಗದ ವಿಷಯವಾಗಿ ಈ ಕುಟುಂಬದ ನಡುವೆ ಕಲಹ ಉಂಟಾಗಿದ್ದು, ಅದು ಈವರೆಗೂ ಬಗೆಹರಿದಿಲ್ಲ. ಹೀಗಿರುವಾಗ ಲೀಲಾವತಿ ಗೌಡ ಅವರು ಓಡಾಡುವ ದಾರಿಗೂ ವೆಂಕಟ ಗೌಡ ಅವರು ಅಡ್ಡಿಪಡಿಸಿದ್ದು, ಈ ವಿಷಯ ಹೊಡೆದಾಟದ ಸ್ವರೂಪಪಡೆದಿದೆ.
ಮೇ 12ರ ಸಂಜೆ ದಾರಿಗೆ ಅಡ್ಡಲಾಗಿ ವೆಂಕಟ ಗೌಡ ಅವರು ಬೇಲಿ ಕಟ್ಟಿದ್ದಾರೆ. ಬೇಲಿ ಕಟ್ಟದ ಹಾಗೇ ಮನವಿ ಮಾಡಿದ ಲೀಲಾವತಿ ಗೌಡ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬೇಲಿ ಕಟ್ಟುವ ವಿಡಿಯೋ ಮಾಡಿದ ಕಾರಣ ಇನ್ನಷ್ಟು ಸಿಟ್ಟಾಗಿ ಕೆಟ್ಟದಾಗಿ ಬೈದಿದ್ದಾರೆ. ಜಗಳ ಬಿಡಿಸಲು ಬಂದ ಲೀಲಾವತಿ ಗೌಡ ಅವರ ತಂದೆಗೂ ವೆಂಕಟ ಗೌಡ ಹಾಗೂ ದೇವಕಿ ಗೌಡ ಅವರು ಕೆಟ್ಟದಾಗಿ ನಿಂದಿಸಿದ್ದಾರೆ. ಅಲ್ಲಿ ಬಿದ್ದಿದ್ದ ಕಟ್ಟಿಗೆಯಿಂದ ಲೀಲಾವತಿ ಗೌಡ ಅವರಿಗೆ ಹೊಡೆದ ಪರಿಣಾಮ ಅವರಿಗೆ ರಕ್ತ ಬಂದಿದೆ. ಈ ಎಲ್ಲಾ ಹಿನ್ನಲೆ ಲೀಲಾವತಿ ಗೌಡ ಅವರು ಪೊಲೀಸರ ಬಳಿ ರಕ್ಷಣೆ ಕೋರಿದ್ದಾರೆ.