ಮುಂಡಗೋಡದ ಅಂಬೇಡ್ಕರ್ ಓಣಿಯ ಬಸವರಾಜ ಚಲವಾದಿ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮಂಜುನಾಥ ನಾಯಕ ಅವರು ಸಿಕ್ಕಿಬಿದ್ದಿದ್ದಾರೆ. ಆ ಕಳ್ಳನ ಬಳಿಯಿದ್ದ 2.44 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ.
ಮುಂಡಗೋಡ ಪಟ್ಟಣದ ಅಂಬೇಡ್ಕರ್ ಓಣಿಯಲ್ಲಿ ಜನವರಿ 27ರಂದು ಕಳ್ಳತನ ನಡೆದಿತ್ತು. ಬಸವರಾಜ ಚಲವಾದಿ ಅವರು ಕೆಲಸಕ್ಕೆ ಹೋದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದರು. ಕಪಾಟಿನಲ್ಲಿದ್ದ ಬಂಗಾರದ ಆಭರಣ ಹಾಗೂ ಬೆಳ್ಳಿ ಸರವನ್ನು ದೋಚಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದರು.
ಮುಂಡಗೋಡ ಪೊಲೀಸ್ ನಿರೀಕ್ಷಕ ರಂಗನಾಥ ನೀಲಮ್ಮನವರ ವಿಶೇಷ ತಂಡ ರಚಿಸಿ ಕಳ್ಳರ ಶೋಧ ನಡೆಸಿದರು. ಜನವರಿ 31 ರಂದು ಬೆಳಗ್ಗೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಬಕದ ಹೊನ್ನಳ್ಳಿಯ ಮಂಜುನಾಥ ಬಸವಂತಪ್ಪ ನಾಯಕ (34) ಎಂಬಾತರ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ಮಂಜುನಾಥ ನಾಯಕ ಅವರನ್ನು ವಿಚಾರಣೆಗೆ ಒಳಪಡಿಸಿದರು. ಆ ವೇಳೆ ಮಂಜುನಾಥ ನಾಯಕರ ಬಳಿ ಬಂಗಾರದ ಗುಂಡಿನ ಸರ, ಇಯರ್ ರಿಂಗ್, ಲಕ್ಷ್ಮಿ ಲಾಕೆಟ್, ಉಂಗುರ ಮೊದಲಾದವು ಕಾಣಿಸಿದವು.
ಆ ಎಲ್ಲಾ ವಸ್ತುಗಳು ಬಸವರಾಜ ಚಲವಾದಿ ಅವರಿಗೆ ಸೇರಿದ್ದು ಎಂದು ದೃಢವಾಯಿತು. ಹೀಗಾಗಿ ಕಳ್ಳನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದರು.