ಕಾರವಾರದ ಕೋಡಿಭಾಗದ ಅರವಿಂದ ನಾಯ್ಕ ಅವರ ಮನೆಗೆ ಸಂಗೀತಾ ಚಿಂಚನಕರ್ ಅವರು ಆಗಮಿಸಿದ್ದು, ಅದನ್ನು ಸಹಿಸದ ಅಕ್ಕಪಕ್ಕದ ಮನೆಯವರು ಅರವಿಂದ ನಾಯ್ಕ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಕಾರವಾರ ಕೋಡಿಭಾಗದ ಪಂಚರಿಶಿವಾಡದಲ್ಲಿ ಅರವಿಂದ ಹೊನ್ನಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ತೆಂಗಿನ ಕಾಯಿ ವ್ಯಾಪಾರ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಸಂಗೀತಾ ಅಶೋಕ ಚಿಂಚನಕರ್ ಅವರು ಕಳೆದ ನಾಲ್ಕು ವರ್ಷಗಳಿಂದ ಅರವಿಂದ ನಾಯ್ಕ ಅವರ ಬಳಿಯೇ ತೆಂಗಿನ ಕಾಯಿ ಖರೀದಿಸುತ್ತಿದ್ದಾರೆ. ಮನೆಗೆ ಬಂದು ಅವರು ಕಾಯಿಪಡೆಯುತ್ತಿದ್ದು, ಅರವಿಂದ ನಾಯ್ಕ ಅವರ ಮನೆಯ ಅಕ್ಕಪಕ್ಕದವರು ಇದನ್ನು ವಿರೋಧಿಸಿದ್ದಾರೆ.
ಅದಾಗಿಯೂ, ಜನವರಿ 5ರ ಮಧ್ಯಾಹ್ನ ಸಂಗೀತಾ ಚಿಂಚನಕರ್ ಅವರು ಅರವಿಂದ ನಾಯ್ಕ ಅವರ ಮನೆಗೆ ಬಂದಿದ್ದರು. ಆಗ, ಪಕ್ಕದ ಮನೆಯ ಬೀರಪ್ಪ ಕರಿಯಣ್ಣ ಅಂಬಿಗ, ಗಜಾನನ ಸುಬ್ರಾಯ ಅಂಬಿಗ ಹಾಗೂ ಶ್ರೀನಿವಾಸ ಬೀರಪ್ಪ ಅಂಬಿಗ ಅವರು ಅಲ್ಲಿ ಮುತ್ತಿಗೆ ಹಾಕಿದರು. `ನಿಮ್ಮ ಮನೆಗೆ ಆ ಹೆಂಗಸು ಬಂದಿದ್ದೇಕೆ?’ ಎಂದು ಆ ಮೂವರು ಪ್ರಶ್ನಿಸಿದರು. `ಆಕೆ ನನ್ನ ಮನೆಗೆ ಬಂದರೆ ನಿಮಗೇನು ತೊಂದರೆ?’ ಎಂದು ಅರವಿಂದ ನಾಯ್ಕರು ಮರುಪ್ರಶ್ನೆ ಹಾಕಿದರು.
ಈ ವೇಳೆ ಮಾತಿನ ಚಕಾಮಕಿ ನಡೆದಿದ್ದು, ಅದು ಹೊಡೆದಾಟದ ಸ್ವರೂಪಪಡೆಯಿತು. ಆ ಮೂವರು ಸೇರಿ ಅರವಿಂದ ನಾಯ್ಕ ಅವರ ತಲೆ, ಬೆನ್ನು, ಕಾಲಿಗೆ ಪೆಟ್ಟು ಕೊಟ್ಟರು. ಎಲ್ಲರೂ ಸೇರಿ ಹಿಗ್ಗಾಮುಗ್ಗ ಥಳಿಸಿದರು. ಈ ವಿಷಯದ ಬಗ್ಗೆ ಅರವಿಂದ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದು, ಅದಾದ ನಂತರ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಸೂಚನೆ ಮೇರೆಗೆ ಕಾರವಾರ ನಗರಠಾಣೆ ಪೊಲೀಸರು ಥಳಿಸಿದ ಮೂವರ ವಿರುದ್ಧ ಪ್ರಕರಣ ದಾಖಲಿಸಿದರು.