ಕುಮಟಾ ಬಗ್ಗೋಣದ ಆದಿತ್ಯ ಮುಕ್ರಿ ಅವರು ಧಾರೇಶ್ವರದ ಶ್ರೀಧರ ನಾಯ್ಕ ಅವರಿಗೆ ಬೈಕ್ ಗುದ್ದಿದ್ದು, ಆ ಅಪಘಾತದ ರಭಸಕ್ಕೆ ಶ್ರೀಧರ ನಾಯ್ಕ ಅವರು ಸಾವನಪ್ಪಿದ್ದಾರೆ.
ಕುಮಟಾದ ಬಗ್ಗೋಣದಲ್ಲಿ ಆದಿತ್ಯ ಮುಕ್ರಿ ಅವರು ಮನೆ ಮಾಡಿಕೊಂಡಿದ್ದಾರೆ. 23 ವರ್ಷದ ಆದಿತ್ಯ ಮುಕ್ರಿ ಅವರು ವೇಗವಾಗಿ ಬೈಕ್ ಓಡಿಸುತ್ತಿದ್ದು, ಅವರ ಅತಿ ವೇಗದ ಚಾಲನೆ ಶ್ರೀಧರ ಹನುಮಂತ ನಾಯ್ಕ (55) ಅವರ ಸಾವಿಗೆ ಕಾರಣವಾಗಿದೆ. ಜನವರಿ 30ರ ರಾತ್ರಿ ಆದಿತ್ಯ ಮುಕ್ರಿ ಅವರು ಹೊನ್ನಾವರದಿಂದ ಕುಮಟಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದರು. ಅದೇ ವೇಳೆ ಧಾರೇಶ್ವರ ಕಡಲತೀರದ ತಿರುವಿನ ಬಳಿ ಧಾರೇಶ್ವರದ ಶ್ರೀಧರ ಹನುಮಂತ ನಾಯ್ಕ ಅವರು ನಡೆದು ಹೋಗುತ್ತಿದ್ದರು.
ಆದಿತ್ಯ ಮುಕ್ರಿ ಅವರು ಓಡಿಸುತ್ತಿದ್ದ ಬೈಕು ಶ್ರೀಧರ ನಾಯ್ಕ ಅವರಿಗೆ ಡಿಕ್ಕಿಯಾಯಿತು. ಪರಿಣಾಮ ಶ್ರೀಧರ ನಾಯ್ಕ ಅವರು ಅಲ್ಲಿಯೇ ಕುಸಿದು ಬಿದ್ದರು. ಆದಿತ್ಯ ಮುಕ್ರಿ ಅವರು ಬಿದ್ದು ಪೆಟ್ಟು ಮಾಡಿಕೊಂಡರು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಶ್ರೀಧರ ನಾಯ್ಕ ಅವರನ್ನು ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದು ಪ್ರಯೋಜನಕ್ಕೆ ಬರಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಶ್ರೀಧರ ನಾಯ್ಕ ಅವರು ಸಾವನಪ್ಪಿದರು. ಸಹೋದರನ ಸಾವಿನ ಬಗ್ಗೆ ಧಾರೇಶ್ವರದ ಶಂಕರ ಹನುಮಂತ ನಾಯ್ಕ ಅವರು ಪೊಲೀಸ್ ಮಾಹಿತಿ ನೀಡಿದ್ದು, ಕುಮಟಾ ಪೊಲೀಸರು ಆದಿತ್ಯ ಮುಕ್ರಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು.