ಅನೇಕ ಅಪರಾಧ ಪ್ರಕರಣಗಳನ್ನು ಬೇದಿಸಿದ್ದ ಮುಂಡಗೋಡು ಪಿಸೈ ಯಲ್ಲಾಲಿಂಗ ಕುನ್ನೂರು ಅಕಾಲಿಕ ಮರಣಕ್ಕೊಳಗಾಗಿದ್ದಾರೆ. 33ನೇ ವಯಸ್ಸಿನಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ.
ಬನವಾಸಿ, ಯಲ್ಲಾಪುರ ಸೇರಿ ವಿವಿಧ ಪೊಲೀಸ್ ಠಾಣೆಯಲ್ಲಿ ಯಲ್ಲಾಲಿಂಗ ಕನ್ನೂರು ಅವರು ಕೆಲಸ ಮಾಡಿದ್ದಾರೆ. ನಂತರ ಮುಂಡಗೋಡು ಪೊಲೀಸ್ ಠಾಣೆಗೆ ಅವರು ವರ್ಗವಾಗಿದ್ದರು. ಕಳೆದ ಕೆಲವು ದಿನಗಳಿಂದ ಯಲ್ಲಾಲಿಂಗ್ ಕುನ್ನೂರು ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆರಂಭದಲ್ಲಿ ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದ ಅವರು ನಂತರ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ನಿರಂತರ ಪ್ರಯತ್ನದ ನಂತರವೂ ಆರೋಗ್ಯದಲ್ಲಿ ಚೇತರಿಕೆ ಕಾಣದೇ ಅವರು ಸಾವನಪ್ಪಿದರು.
ಶಿಸ್ತುಬದ್ಧ ಕಾರ್ಯವೈಖರಿ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದಾಗಿ ಯಲ್ಲಾಲಿಂಗ ಕನ್ನೂರು ಅವರು ಜನಸ್ನೇಹಿ ಆಗಿದ್ದರು. ಅನೇಕ ಕ್ಲಿಷ್ಟಕರ ಪ್ರಕರಣಗಳನ್ನು ಅವರು ಉಪಾಯವಾಗಿ ಬೇದಿಸಿದ್ದರು. ಭವಿಷ್ಯದಲ್ಲಿ ಉನ್ನತ ಹುದ್ದೆಗೇರಬೇಕಿದ್ದ ಯುವ ಅಧಿಕಾರಿಯ ಸಾವು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅವರ ಸಾವಿನ ಸುದ್ದಿ ಪೊಲೀಸರಿಗೂ ಆಘಾತ ತಂದಿದೆ.