ಸಿದ್ದಾಪುರದ ಕ್ಯಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಾಳ ಹಾಗೂ ನಾಯ್ಕಾರ್ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಮರ, ರಸ್ತೆ ಮತ್ತು ವಿದ್ಯುತ್ ಕಂಬಗಳಿಗೆ ವಿವಿಧ ಸಂಖ್ಯೆ ಬರೆಯಲಾಗಿದೆ. ಯಾವ ಕಾರಣಕ್ಕಾಗಿ ಈ ಸಂಖ್ಯೆ ಬರೆಯಲಾಗಿದೆ? ಎಂಬುದು ಯಾರಿಗೂ ಗೊತ್ತಿಲ್ಲ.
ಯಾವ ಸಮಯದಲ್ಲಿ, ಯಾರು ಬಂದು ಈ ಮಾರ್ಕಿಂಗ್ ಮಾಡಿದ್ದಾರೆ? ಎಂಬುದರ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ಇಲ್ಲ. ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡದೆ ಈ ರೀತಿ ಗುರುತು ಹಾಕಿರುವುದು ಅನುಮಾನ ಮತ್ತು ಆತಂಕಕ್ಕೆ ಕಾರಣವಾಗಿದೆ.
ಚರ್ಚೆಯಾಗುತ್ತಿರುವ ಅಘನಾಶಿನಿ ನದಿ ತಿರುವು ಯೋಜನೆಯ ಭಾಗವಾಗಿ, ಕಲ್ಲಾಳ ಗ್ರಾಮದ ಇಳಿಮನೆ ಹೊಳೆಗೆ ಚಿಕ್ಕ ಡ್ಯಾಮ್ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾರ್ಕಿಂಗ್ ಮಾಡಿರುವುದೇ ಎಂಬ ಅನುಮಾನ ಜನರಲ್ಲಿ ಮೂಡಿದೆ. ಯೋಜನೆಯ ಬಗ್ಗೆ ಸರ್ಕಾರ ಅಥವಾ ಸಂಬAಧಪಟ್ಟ ಇಲಾಖೆಯಿಂದ ಅಧಿಕೃತ ಮಾಹಿತಿ ಇಲ್ಲದಿರುವುದರಿಂದ, ಅರಣ್ಯ ನಾಶ, ಜಮೀನು ಕಳೆದುಕೊಳ್ಳುವ ಭೀತಿಗೆ ಜನ ಒಳಗಾಗಿದ್ದಾರೆ.