ಕಾರವಾರದ ಶಿರವಾಡದಲ್ಲಿರುವ ತ್ಯಾಜ್ಯ ವಿಲೆವಾರಿ ಘಟಕಕ್ಕೆ ಬೆಂಕಿ ಬಿದ್ದಿದೆ. ಭಾರೀ ಪ್ರಮಾಣದ ಗಾಳಿಗೆ ಬೆಂಕಿ ಪ್ರಮಾಣ ಉಲ್ಬಣಿಸಿದ್ದು ಅಗ್ನಿಶಾಮಕ ಸಿಬ್ಬಂದಿ ಸಾಹಸದಿಂದ ದೊಡ್ಡ ಅನಾಹುತ ತಪ್ಪಿದೆ.
ಕಾರವಾರ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಶುಕ್ರವಾರ ಬೆಳಗಿನ ಜಾವ ಬೆಂಕಿ ಬಿದ್ದಿದೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿದ್ದಾರೆ. ನಸುಕಿನ 3ಗಂಟೆಗೆ ಈ ಅವಘಡ ನಡೆದಿದ್ದು, ಸ್ಥಳದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಸುಟ್ಟಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದೆ.
ಹಲವು ಕಿಲೋಮೀಟರ್ ದೂರದಿಂದಲೂ ದಟ್ಟವಾದ ಹೊಗೆ ಹಾಗೂ ಎತ್ತರದ ಜ್ವಾಲೆಗಳು ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಆತಂಕಕ್ಕೆ ಒಳಗಾದರು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಆರಂಭಿಸಿದರು. ಬೆಂಕಿಯ ತೀವ್ರತೆಯನ್ನು ಗಮನಿಸಿ, ಅಂಕೋಲಾ ಹಾಗೂ ಗ್ರಾಸಿಮ್ ಇಂಡಸ್ಟ್ರೀಸ್‌ನಿಂದ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕರೆಸಲಾಯಿತು.
ಡಂಪಿಂಗ್ ಯಾರ್ಡ್ ಸಮೀಪದಲ್ಲಿರುವ ಪ್ರದೇಶಗಳಿಗೆ ಬೆಂಕಿ ಹರಡದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಕತ್ತಲೆಯಲ್ಲಿಯೂ ಕಾರ್ಯಾಚರಣೆ ಮುಂದುವರೆಸಿದ ಪರಿಣಾಮ ಇನ್ನಷ್ಟು ಅನಾಹುತ ತಪ್ಪಿತು.
ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಚಳಿ ತಪ್ಪಿಸಲು ಕೆಲವರು ಹಚ್ಚಿದ ಸಣ್ಣ ಬೆಂಕಿಯಿಂದ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.