ನಿತ್ಯವೂ ಲಕ್ಷಾಂತರ ಜನ ಭಾಗವಹಿಸಲಿರುವ ಯಲ್ಲಾಪುರ ಜಾತ್ರೆಗೆ ದಿನಗಣನೆ ಶುರುವಾಗಿದ್ದು, ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ದೇಗುಲ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಆಕರ್ಷಕ ಮಂಟಪ, ಎಲ್ಲಡೆ ವಿದ್ಯುತ್ ಅಲಂಕಾರ, ಭಕ್ತರಿಗೆ ಮೂಲಭೂತ ಸೌಕರ್ಯ ಸೇರಿ ಸುರಕ್ಷತೆ, ಭದ್ರತೆಗೆ ಒತ್ತು ನೀಡಿ ಅದ್ಧೂರಿ ಜಾತ್ರೆ ನಡೆಸುವ ತಯಾರಿ ನಡೆಯುತ್ತಿದೆ.
ಯಲ್ಲಾಪುರ ಗ್ರಾಮದೇವಿ ಜಾತ್ರಾ ಮಹೋತ್ಸವ ಫೆ 11 ರಿಂದ 19ವರೆಗೆ ನಡೆಯಲಿದೆ. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಭಾಗವಹಿಸಲಿದ್ದು, ಅವರಿಗೆ ಕಿಂಚಿತ್ತು ಸಮಸ್ಯೆ ಆಗದಂತೆ ನೋಡಿಕೊಳ್ಳುವ ಪ್ರಯತ್ನ ನಡೆದಿದೆ. ಪಟ್ಟಣದ ದೇವಿ ಮೈದಾನದಲ್ಲಿ ಜಾತ್ರಾ ಮಂಟಪ ರಚಿಸಲಾಗಿದ್ದು, ದೇವಸ್ಥಾನದ ಮಾದರಿಯಲ್ಲಿ ಆಕರ್ಷಕವಾಗಿದೆ. ಉದ್ಯಮಿ ಬಾಲಕೃಷ್ಣ ನಾಯಕ ಹಾಗೂ ರವಿ ಶಾನಭಾಗ ಅವರ ಮಾರ್ಗದರ್ಶನದಲ್ಲಿ 25 ಲಕ್ಷ ರೂ ವೆಚ್ಚದ ಜಾತ್ರಾ ಮಂಟಪ ನಿರ್ಮಾಣಕ್ಕೆ ಸಾಗರಿಕಾ ಸಂಸ್ಥೆಯವರು ಮುಂದಾಗಿದ್ದಾರೆ. ಹೊಯ್ಸಳ ಶೈಲಿಯ ಕಂಚಿ ದೇವಾಲಯ ಮಾದರಿಯಲ್ಲಿ ಮಂಟಪ ರಚನೆಗಾಗಿ ಕಾರ್ಮಿಕರು ಒಂದು ತಿಂಗಳ ಕಾಲ ಇಲ್ಲಿ ದುಡಿದಿದ್ದಾರೆ. ಮಂಟಪದಲ್ಲಿ ಅಷ್ಟಲಕ್ಷ್ಮೀಯರ ಮೂರ್ತಿ ಅಳವಡಿಸುತ್ತಿದ್ದು, ಅವುಗಳಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಮಾತ್ರ ಬಾಕಿಯಿದೆ.
ಈಬಾರಿ ಜಾತ್ರಾ ಮಂಟಪದ ಎಡಗಡೆಗೆ ದೇವಿ ದರ್ಶನಕ್ಕೆ ಸರತಿಯಲ್ಲಿ ತೆರಳಲು ವ್ಯವಸ್ಥೆ ಮಾಡಲಾಗಿದೆ. ದರ್ಶನ ಆದ ನಂತರ ಬಲಗಡೆಗೆ ತೆರಳಿ ತೀರ್ಥ-ಪ್ರಸಾದ ಪಾನಕ ವಿತರಣೆಗೆ ಸ್ಥಳ ನೀಡಲಾಗಿದೆ. ದೇವರ ಪೂಜಾ ಸಾಮಾಗಿ, ಉಡಿ ಸಾಮಗ್ರಿಗಳು ಸಹ ಜಾತ್ರಾ ಮಂಟಪದಲ್ಲಿಯೇ ಸಿಗಲಿದ್ದು, ಭಕ್ತರು ಅಲ್ಲಿಯೇ ಸಾಮಗ್ರಿ ಖರೀದಿಸಬೇಕು ಎಂದು ದೇಗುಲ ಸಮಿತಿಯವರು ಮನವಿ ಮಾಡಿದ್ದಾರೆ. ರೇಶ್ಮೆ ಸೀರೆ ಉಡಿಯೂ ಸಹ ಮಂಟಪದ ಆವಾರದಲ್ಲಿಯೇ ಸಿಗಲಿದೆ. ಇನ್ನೂ, ದೇವರ ಎದುರಿಗೆ ಸಾರ್ವಜನಿಕ ರಿಗೆ ದರ್ಶನಕ್ಕೆ ವಿಶೇಷ ಸ್ಥಳ ಕಾಯ್ದಿರಿಸಲಾಗಿದೆ. ಶ್ರೀರಾಮ ರೆಸಿಡೆನ್ಸಿ ಹಿಂಬಾಗ, ವೈಟಿಎಸ್ ಮೈದಾನ ಹಾಗೂ ಮಾದರಿ ಶಾಲೆ ಆವರಣದಲ್ಲಿ ಮನರಂಜನಾ ಆಟಿಕೆಗಳ ಜೋಡಣೆ ಕಾರ್ಯ ನಡೆದಿದೆ. ಮದ್ಗುಣಿ ಕಟ್ಟಡದ ಬಳಿ ಹೆಸ್ಕಾಂ ಎದುರು ನಾಟಕ ಕಂಪನಿ ಆಗಮಿಸಿದ್ದು, ನಾಟಕದ ಸಿದ್ಧತೆಯೂ ಜೋರಾಗಿದೆ.
`ಜಾತ್ರಾ ಪೂರ್ವ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ಫೆ 11ರ ಮಧ್ಯಾಹ್ನ 3.30ಕ್ಕೆ ಗ್ರಾಮದೇವಿಯವರ ಮೆರವಣಿಗೆ ಆರಂಭಗೊAಡು ದೇವಿ ಮೈದಾನದ ಜಾತ್ರಾ ಗದ್ದುಗೆಯಲ್ಲಿ ಗ್ರಾಮದೇವಿಯರು ವಿರಾಜಮಾನರಾಗಲಿದ್ದಾರೆ. ಫೆ 12ರಿಂದ ಭಕ್ತರು ಉಡಿ, ಹಣ್ಣುಕಾಯಿ ಮುಂತಾದ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ’ ಎಂದು ದೇವಸ್ಥಾನದ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. `ಜಾತ್ರಾ ಮಂಟಪದಲ್ಲಿ 18 ಸಿ ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಈಗಾಗಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಸರಗಳ್ಳರು ಮತ್ತು ಜೇಬುಗಳ್ಳರನ್ನು ಗುರುತಿಸುವ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ಶ್ರೀ ಸತ್ಯಸಾಯಿ ಭಕ್ತವೃಂದದಿAದ ನಿತ್ಯ ಪಾನಕ ಸೇವೆ ನಡೆಯಲಿದೆ. ಬರುವ ಭಕ್ತರಿಗೆ ಸಮರ್ಪಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ಅವಶ್ಯವಿದ್ದಷ್ಟು ಫ್ಯಾನ್ ಮತ್ತು ಕೂಲರ್‌ಗಳ ಅಳವಡಿಸಲಾಗಿದೆ. ಪ್ರಥಮ ಚಿಕಿತ್ಸೆ ಸೌಲಭ್ಯ, ಅಗ್ನಿಶಾಮಕ ಮತ್ತು ಆಂಬುಲೆನ್ಸ್ಗಳ ವ್ಯವಸ್ಥೆ, ಜನರೇಟರ್‌ಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ಮಹಾಪೂಜಾ ಸೇವೆ, ರೇಷ್ಮೆ ಉಡಿ ಸೇವೆ ಜೊತೆಗೆ ಶೀಘ್ರ ದರ್ಶನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ’ ಎಂದವರು ವಿವರಿಸಿದ್ದಾರೆ.
`50 ಅರ್ಚಕರು, ಶೆಳದೇವ ಸಮಿತಿಯ 25 ಸದಸ್ಯರು, 50 ಸ್ವಯಂ ಸೇವಕರು, 20 ಶಸ್ತ್ರಧಾರಿ ಪೊಲೀಸರು ಜಾತ್ರಾ ಮಂಟಪದಲ್ಲಿ ಭಕ್ತಾದಿಗಳ ಅನುಕೂಲಕ್ಕೆ ಲಭ್ಯವಿರುತ್ತಾರೆ. 400 ಪೊಲೀಸರನ್ನು ಜಾತ್ರೆಯ ಸುರಕ್ಷತಾ ವ್ಯವಸ್ಥೆಗೆ ಇಲಾಖೆ ನೇಮಿಸಿದೆ’ ಎಂದವರು ಹೇಳಿದ್ದಾರೆ. `ಜಾತ್ರಾ ಮಂಟಪಕ್ಕೆ ಬಂದು ಅಮ್ಮನವರ ಸೇವೆ ಮಾಡುವ ಭಕ್ತಾದಿಗಳು ಆಡಳಿತ ಕಮಿಟಿಯವರ ಸೇವಾ ಕೌಂಟರ್‌ಗಳಲ್ಲಿಯೇ ಉಡಿ ಸಾಮಾನುಗಳನ್ನು ಪಡೆಯಬೇಕು’ ಎಂದು ಅವರು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆಯಗಾರ ಸಮಿತಿಯ ಮುಖ್ಯಸ್ಥ ಮನೋಹರ ಹೆಗಡೆ, ಅರ್ಚಕ ಪರಶುರಾಮ ಆಚಾರಿ, ಮಂಟಪ ಉಸ್ತುವಾರಿಗಳಾದ ಬಾಲಕೃಷ್ಣ ನಾಯಕ, ರವಿ ಶಾನಭಾಗ, ದೇವಸ್ಥಾನದ ವ್ಯವಸ್ಥಾಪಕ ಗೋಪಾಲಕೃಷ್ಣ ಕೊಂಬೆ ಅವರು ಈ ವೇಳೆ ಹಾಜರಿದ್ದು, ಜಾತ್ರೆಯ ಬಗ್ಗೆ ಮಾಹಿತಿ ನೀಡಿದ್ದಾರೆ.