ಕುಮಟಾ ಹೊಲನಗದ್ದೆ ಬಳಿಯ ಕಡ್ಲೆಯಲ್ಲಿರುವ ಅಂಗನವಾಡಿ ಕೇಂದ್ರ ಹದಗೆಟ್ಟಿದೆ.
ಅಂಗನವಾಡಿ ಕೇಂದ್ರದ ಗಾಜುಗಳನ್ನು ಕಿಡಿಗೇಡಿಗಳು ಒಡೆದಿದ್ದಾರೆ. ಅಲ್ಲಿಯೇ ಅಮಲು ಪದಾರ್ಥಗಳನ್ನು ಸೇವಿಸಿ ಶೈಕ್ಷಣಿಕ ವಾತಾವರಣವನ್ನು ಹದಗೆಡಿಸಿದ್ದಾರೆ. ಅಂಗನವಾಡಿ ಕೇಂದ್ರದ ಸುತ್ತಲಿನ ಪ್ರದೇಶ ಪುಂಡ-ಪೋಕರಿಗಳ ಹಾವಳಿಯಿಂದ ಕೂಡಿದ್ದರೂ ಅದನ್ನು ತಡೆಯುವ ಕೆಲಸ ನಡೆದಿಲ್ಲ.
ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಈ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಪ್ರಶ್ನಿಸಿದ್ದಾರೆ. ಗಾಂಧಿ ವನ ಕ್ರೀಡಾಂಗಣದ ಸಮುದಾಯ ಭವನದಲ್ಲಿ ನಡೆಯುವ ಅಂಗನವಾಡಿ ಬಳಿಯೇ ಮದ್ಯದ ಬಾಟಲಿ ಬಿದ್ದಿರುವುದನ್ನು ನೋಡಿ ಅಸಮಧಾನವ್ಯಕ್ತಪಡಿಸಿದ್ದಾರೆ. ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರು ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಪಟೇಲ್ ಅವರನ್ನು ಪ್ರಶ್ನಿಸಿದ್ದಾರೆ. `ಅಂಗನವಾಡಿಗೆ ಸ್ವಂತ ಕಟ್ಟಡ ಇಲ್ಲ. ಸ್ವಂತ ಕಟ್ಟಡಕ್ಕೆ ಜಾಗ ಹುಡುಕುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
`ಅಂಗನವಾಡಿ ವಾತಾವರಣ ಹದಗೆಟ್ಟಿದ್ದು, ಅಲ್ಲಿ ಅಗತ್ಯವಿರುವ ಸೌಕರ್ಯ ಕಲ್ಪಿಸಬೇಕು. ಮುಖ್ಯವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಸಾಮಾಜಿಕ ಕಾರ್ಯ ಕರ್ತಸುಧಾಕರ ನಾಯ್ಕ ಹಾಗೂ ನಿವೃತ್ತ ಸರಕಾರಿ ಅಧಿಕಾರಿ ನಾಗೇಶ್ ಅವರು ಆಗ್ರಹಿಸಿದ್ದಾರೆ. `ಅಂಗನವಾಡಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಶೌಚಾಲಯದ ವ್ಯವಸ್ಥೆಯೂ ಸರಿಯಾಗಿಲ್ಲ. ಅದೇ ರಸ್ತೆಯಲ್ಲಿ ಅಧಿಕಾರಿಗಳು ತಿರುಗುತ್ತಿದ್ದರೂ ಮಕ್ಕಳ ಹಕ್ಕುಗಳ ಬಗ್ಗೆ ಗಮನಹರಿಸಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ.