ಬಂಗಾರ ಖರೀದಿಸಲು ಕುಟುಂಬದ ಜೊತೆ ಭಟ್ಕಳಕ್ಕೆ ಬಂದಿದ್ದ ಕುಮಟಾದ ಮಧುಮಗ ಕಾಣೆಯಾಗಿದ್ದು, ಪೊಲೀಸರು ಹರಸಾಹಸದಿಂದ ಜಾಕೀರ ಬೇಗ್ ಅವರನ್ನು ಹುಡುಕಿದ್ದಾರೆ. ಮದುವೆಗಾಗಿ ಚಿನ್ನ ಖರೀದಿಸಿಲು ಹೋಗಿ ಕಣ್ಮರೆಯಾಗಿದ್ದ ಜಾಕೀರ ಬೇಗ್ ಸರಿ ಸುಮಾರು ಐದು ತಿಂಗಳ ನಂತರ ಪತ್ತೆಯಾಗಿದ್ದಾರೆ.
ಕುಮಟಾದ ಜಾಕೀರ ಬೇಗ್ (33) ಅವರು ವಿದೇಶದಲ್ಲಿ ಕೆಲಸಕ್ಕಿದ್ದರು. ಊರಿಗೆ ಬಂದ ಅವರಿಗೆ ಮದುವೆ ಮಾಡಿಸುವ ಮಾತುಕತೆ ನಡೆದಿತ್ತು. ಮದುವೆಗಾಗಿ ಚಿನ್ನ ಖರೀದಿಸಲು ಅವರು ಭಟ್ಕಳಕ್ಕೆ ಹೋಗಿದ್ದರು. ಅಲ್ಲಿ ಮಸೀದಿಗೆ ಹೋಗಿ ಬರುವೆ ಎಂದು ಹೊರಟಿದ್ದ ಜಾಕೀರ್ ಬೇಗ್ ಕಾಣೆಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಎಲ್ಲಾ ಕಡೆ ಶೋಧ ನಡೆಸಿದ್ದರು. ಆದರೆ, ಕಾಣೆಯಾದ ಯುವಕನ ಸುಳಿವೇ ಸಿಕ್ಕಿರಲಿಲ್ಲ.
ಅಕ್ಟೋಬರ್ 18ರಿಂದ ಜಾಕೀರ ಅವರಿಗಾಗಿ ಹುಡುಕಾಟ ನಡೆದಿದ್ದು, ಸಂಬAಧಿಕರು-ಪರಿಚಿತರ ಮನೆಯಲ್ಲಿ ಹುಡುಕಿದರೂ ಪ್ರಯೋಜನವಾಗಿರಲಿಲ್ಲ. ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದರಿಂದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದ ಪೊಲೀಸರು ತಾಂತ್ರಿಕ ಜಾಡು ಹಿಡಿದಾಗ ಸಿಕ್ಕ ಸುಳಿವು ರೋಚಕವಾಗಿತ್ತು. ನಾಪತ್ತೆಯಾದ ಜಾಕೀರ ಅವರು ತಾವು ಬಳಸುತ್ತಿದ್ದ ಮೊಬೈಲ್ ಫೋನ್ ಮಾರಾಟ ಮಾಡಿರುವುದು ಗಮನಕ್ಕೆ ಬಂದಿತು.
ಇದರ ಜಾಡು ಹಿಡಿದು ಹೊರಟ ಇನ್ಸಪೆಕ್ಟರ್ ದಿವಾಕರ್ ಪಿ ಎಂ ಹಾಗೂ ಪಿಸೈ ನವೀನ ನಾಯ್ಕ ನೇತೃತ್ವದ ವಿಶೇಷ ತಂಡ ತುಮಕೂರಿನಲ್ಲಿ ಶೋಧ ನಡೆಸಿದಾಗ ಅಲ್ಲಿನ ಪ್ಯಾಕ್ಟರಿಯೊಂದರಲ್ಲಿ ಜಾಕೀರ್ ಸಿಕ್ಕಿ ಬಿದ್ದರು. ಅಲ್ಲಿ ಕೆಲಸಕ್ಕೆ ಸೇರಿದ್ದ ಜಾಕೀರ್ ಅವರನ್ನು ಪೊಲೀಸರು ಕುಟುಂಬದವರಿಗೆ ಹಸ್ತಾಂತರಿಸಿದರು. ವಿದೇಶದಿಂದ ಮರಳಿ, ಮದುವೆ ಸಡಗರದಲ್ಲಿದ್ದ ಯುವಕ ದಿಢೀರ್ ಆಗಿ ಕಾರ್ಖಾನೆಯ ಕೂಲಿಯಾಳಾಗಿರುವದರ ಹಿಂದಿನ ರಹಸ್ಯ ಗೊತ್ತಾಗಿಲ್ಲ.